ರೋಮನ್ ಸಾಹಿತ್ಯ  

ಪ್ರಾಚೀನ ಲ್ಯಾಟಿನ್ ಸಾಹಿತ್ಯವೇ ರೋಮನ್ ಸಾಹಿತ್ಯ. ರೋಮನರ ಕಲಾತ್ಮಕ ಸಾಹಿತ್ಯ ಕ್ರಿ.ಪೂ. 240ರಂದು ಲಿವಿಯನ್ ಆಂಡ್ರಾನಿಕಸ್ಸನಿಂದ ಪ್ರಾರಂಭಗೊಂಡಿತೆಂದು ನಿರ್ಧರಿಸಲಾಗಿದೆ. ಇದಕ್ಕೆ ಮುನ್ನ ಸಾಹಿತ್ಯವೇ ಇರಲಿಲ್ಲ ಎನ್ನಲಾಗದು. ಬರೆವಣಿಗೆಯ ಮೊಟ್ಟಮೊದಲಣ ಬಳಕೆ ಸಂವತ್ಸರದಲ್ಲಿ ನಡೆದ ಮುಖ್ಯ ಘಟನೆಗಳನ್ನೂ ವೈಚಿತ್ರ್ಯಗಳನ್ನೂ ವರದಿಮಾಡಿಡುವ ಆನಲೆಸ್ ಮ್ಯಾಕ್ಸಿಮಸ್ ಎಂಬ ಬಖೈರು ಬಹಳ ಮುಖ್ಯವಾದುದು. ಇಂಥ ಬಖೈರುಗಳಲ್ಲಿ ಸಾಹಿತ್ಯಾಂಶ ಬಲು ಕಡಿಮೆ ಯಾಗಿದ್ದರೂ ದೇಶಭಕ್ತಿಯನ್ನು ಕುದುರಿಸುವ ನೆನಪನ್ನು ಒದಗಿಸಿ ಅವು ಮುಂದೆ ಬಂದ ಕಥನಕಾವ್ಯ ಚರಿತ್ರೆಗಳಿಗೆ ಮುನ್ಸೂಚನೆಯಾದವು. ಕ್ರಿಪೂ 312ರಿಂದ 308ರ ತನಕ ಪರಾಮರ್ಶಕನಾಗಿದ್ದ ಅಪ್ಪಿಯಸ್ ಕ್ಲಾಡಿಯಸ್ ಕೀಕಸ್ ಶಕ್ತ ವಾಗ್ಮಿಯಾಗಿದ್ದ; ಸ್ಯಟರ್ನಿಯನ್ ಛಂದಸ್ಸಿನ ಕೆಲವು ಪದ್ಯಗಳನ್ನು ನೀತಿಬೊಧಗೆ ಈತ ಉಪಯೋಗಿಸಿದನೆಂದು  ತಿಳಿದುಬರುತ್ತದೆ. ಚಟುಲರೂ ಕ್ಷಿಪ್ರಮತಿಗಳೂ ಆದ ಪ್ರಾಚೀನ ರೋಮನರಿಗೆ ತೀವ್ರಗತಿಯ ಉತ್ಸಾಹಪೂರಿತ ಸ್ಯಟರ್ನಿಯನ್ ತಕ್ಕುದಾದ ಛಂದಸ್ಸಾಗಿತ್ತು. ಆದ್ಯ ಅರ್ಚಕವರ್ಗ ತಮ್ಮ ಮತಾಚರಣೆಯ ಪ್ರಾಕೃತ ನೃತ್ಯಗಳಲ್ಲಿ ಎಬ್ಬಿಸುತ್ತಿದ್ದ ಉದ್ಗಾರಗಳೇ ಆ ಛಂದಸ್ಸಿಗೆ ಮೂಲ; ವೇಟೀಸ್ ಎಂಬ ಸಂಚಾರಿ ಕಣಿಗಾರರೂ (ಚಾರಣರು) ಅದನ್ನು ಬಳಸುತ್ತಿದ್ದರು; ಬೆಳೆಯ ಸುಗ್ಗಿ ಮತ್ತು ದ್ರಾಕ್ಷಿಹಣ್ಣಿನ ಸುಗ್ಗಿಗಳ ಸಮಯದಲ್ಲಿ ಜನ ಕುಣಿಯುತ್ತ ಹಾಡುತ್ತ ವಿನೋದಕ್ಕಾಗಿ ಪರಸ್ಪರ ಲೇವಡಿ ನಡೆಸುವಾಗ ಈ ಛಂದಸ್ಸಿನ ಫೆಸೆನೈನ್ ಶ್ಲೋಕಗಳು ಕೇಳಬರುತ್ತಿದ್ದುವು. ಅಷ್ಟೇ ಅಲ್ಲದೆ ವೀರರ ಸಮಾಧಿ ಸಂಸ್ಕಾರದ ಅಂಗವಾಗಿ ನೆರವೇರುತ್ತಿದ್ದ ಪ್ರಶಂಸಾಗೀತದ ಹಾಡುಗಾರಿಕೆಗೂ ಈ ಛಂದಸ್ಸು ವಾಹಕವಾಗುತ್ತಿತ್ತು. ಎಲ್ಲಕ್ಕೂ ಮಿಗಿಲಾಗಿ ಒಂದು ಬಗೆಯ ನಾಟಕೀಯ ಮಿಶ್ರಣ ಸ್ಯಾಟ್ಯುರ ಎಂಬ ಹೆಸರಿನಲ್ಲಿ ಸಂಗೀತದೊಂದಿಗೆ ಅಭಿನಯಗೊಳ್ಳುತ್ತಿತ್ತು; ಅದಕ್ಕೆ ಕ್ಲುಪ್ತ ಸಂವಿಧಾನವಾಗಲಿ ಪಾತ್ರ ಪೋಷಣೆಯಾಗಲಿ ಇರುತ್ತಿರಲಿಲ್ಲ. ನಟರು ತಮ್ಮ ಬುದ್ಧಿಶಕ್ತಿ ಯಿಂದಲೂ ಚಾಕಚಕ್ಯತೆಯಿಂದಲೂ ಮಾತುಕತೆ ಟೀಕೆ ವಿಡಂಬನೆ ಗಳಿಂದಲೂ ಪ್ರೇಕ್ಷಕರಿಗೆ ಹರ್ಷ ವೀಯುತ್ತಿದ್ದರು. ರೋಮನ್ ಸಾಹಿತ್ಯದ ವಿಕಾಸಕ್ಕೆ ಸ್ಯಾಟ್ಯುರ ಛಂದಸ್ಸು ಮೂಲಸೆಲೆಯಾಯಿತು. ಹೀಗೆ ವಿಕಾಸಗೊಂಡ ರೋಮನ್ ಸಾಹಿತ್ಯವನ್ನು ಐದು ಮುಖ್ಯ ಕಾಲಘಟ್ಟಗಳಾಗಿ ವಿಭಾಗಿಸಿ ವಿವೇಚಿಸಲಾಗಿದೆ.

ಮೊದಲನೆಯ ಅವಧಿ (ಕ್ರಿ.ಪೂ. 240-80): ರೋಮನ್ ಗಣರಾಜ್ಯ ಯುದ್ಧಮಾಡಿ ಬಲು ಫಲವತ್ತಾದ ಟಾರೆಂಟಮ್ ಪ್ರದೇಶವನ್ನು ಕ್ರಿಪೂ 272ರಲ್ಲಿ ಗೆದ್ದು ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಂಡಿತು. ಆಗ ಅನೇಕ ಗ್ರೀಕರು ಗುಲಾಮರಾಗಿ ರೋಮಿಗೆ ಬಂದರು. ಅವರಲ್ಲಿ ಲಿವಿಯಸ್ ಆಂಡ್ರಾನಿಕಸ್ (ಕ್ರಿ.ಪೂ. 284-204)ಒಬ್ಬ. ಯಜಮಾನನ ಮನೆಯಲ್ಲಿ ಗ್ರೀಕ್ ಭಾಷೆ ಸಾಹಿತ್ಯಗಳನ್ನು ಕಲಿಸುವುದು ಇವನ ಮುಖ್ಯ ಕೆಲಸವಾಗಿತ್ತು. ವಿದ್ಯಾವಂತರೆನ್ನಿಸಿಕೊಳ್ಳಲು ಬಯಸಿದ ರೋಮನ್ ಶ್ರೀಮಂತ ತರುಣರಲ್ಲರಿಗೂ ಗ್ರೀಕ್ ಪ್ರಿಯವೆನಿಸಿತು. ದಕ್ಷಿಣ ಇಟಲಿಯನ್ನು ಪೂರ್ತಿ ಸ್ವಾಧೀನಪಡಿಸಿಕೊಂಡ ರೋಮಿಗೆ ಸಿಸಿಲಿ ದ್ವೀಪದ ಮೇಲೆ ಕಣ್ಣುಬಿತ್ತು. ಕಾರ್ತೇಜಿನ ಮೇಲೆ ಯುದ್ಧ ಹೂಡಿ ಕ್ರಿ.ಪೂ. 242ರಲ್ಲಿ ಅದನ್ನು ತನ್ನ ಪ್ರಾಂತವನ್ನಾಗಿಸಿಕೊಂಡಿತು. ಕ್ರಿಪೂ 237ರಲ್ಲಿ ಸಾರ್ಡಿನಿಯಾ ಮತ್ತು ಕಾರ್ಸಿಕ ರೋಮಿಗೆ ಅಧೀನವಾದುವು. ಸಿಸಿಲಿಯಲ್ಲಿ ಗ್ರೀಕ್ ನಾಟಕಪ್ರದರ್ಶನವನ್ನು ಅವಲೋಕಿಸಿದ ರೋಮನರಿಗೆ ಉತ್ಕøಷ್ಟ ಕಲೆಯ ಪರಿಚಯ ಲಭಿಸಿತಾಗಿ ರೋಮಿನಲ್ಲೂ ಅಂಥ ಕಲೋತ್ಸವ ನಡೆಸಬೇಕೆಂಬ ಹುರುಡು ಉಂಟಾಯಿತು. ಕ್ರಿಪೂ 240ರಲ್ಲಿ ಅಂಡ್ರಾನಿಕಸ್ ಧೈರ್ಯದಿಂದ ಒಂದು ಪ್ರಯೋಗ ಮಾಡಿದ. ಸಾರ್ವಜನಿಕ ಉತ್ಸವದ ಅಂಗವಾಗಿ ಗೀತಾತ್ಮಕ ಕಲಸುಮೆಲಸಿನ ಮೇಳದ ಬದಲು ಗ್ರೀಕಿನಿಂದ ಅನುವಾದ ಮಾಡಿದ ಒಂದು ಅಧಿಕೃತ ನಾಟಕವನ್ನು ಆಡಿಸಿದ. ಅಲ್ಲಿಂದ ಮುಂದೆ ನಾಟಕವೆಂದರೆ ಜನರಲ್ಲಿ ಅಪೇಕ್ಷೆ ಬೆಳೆಯಿತು. ಗ್ರೀಕ್ ಸಾಹಿತ್ಯ ಆಶ್ರಯಿಸಿದರೇ ಲ್ಯಾಟಿನ್ ಸಾಹಿತ್ಯಕ್ಕೆ ಶ್ರೇಯಸ್ಸು ಎಂಬುದನ್ನು ಆಂಡ್ರಾನಿಕಸ್ ಸಾರಿದ; ಹಾಗೂ ಅನುಸರಿಸುವ ವಿಧಾನವನ್ನು ತೋರಿಸಿಕೊಟ್ಟ; ಹೋಮರನ ಆಡಿಸ್ಸಿಯನ್ನು (ಒಡಿಸ್ಸಿ) ಲ್ಯಾಟಿನ್ನಿಗೆ ತರ್ಜುಮೆ ಮಾಡಿದ. ಅನಂತರ ಕ್ರಿಪೂ 235ರಲ್ಲಿ ಆಗಮಿಸಿದ ನೀವಿಯಸ್ (ಕ್ರಿ.ಪೂ. 270-201?) ಅದೇ ಕೆಲಸವನ್ನು ಮುಂದುವರಿಸಿದ. ವಿನೋದ ನಾಟಕ, ಗಂಭೀರ ನಾಟಕ ಎರಡನ್ನೂ ಗ್ರೀಕಿನಿಂದ ಎರವಲು ತೆಗೆದುಕೊಂಡು ಲ್ಯಾಟಿನ್ನಿಗೆ ಹೊಂದಿಸಿಕೊಟ್ಟ. ಆದರೆ ಇವನ ಜಾಯಮಾನ, ನೋಟಕರ ಪ್ರಬಲೇಚ್ಛೆ, ಭಾಷೆಯ ಸ್ಥಿತಿಗತಿ ಮೂರೂ ಒಟ್ಟಾಗಿ ಇವನನ್ನು ವಿನೋದ ನಾಟಕದ ಕಡೆಗೇ ಎಳೆದುವು. ವಿನೋದ ನಾಟಕದ ಮೂಲಕ, ಗ್ರೀಕರ ಹಳೆಯ ವಿನೋದ ನಾಟಕಗಳಂತೆ, ರಾಜಕೀಯ ವಿಂಡಬನೆಯನ್ನು ಸಾಧಿಸುವ ಹಂಬಲ ನೀವಿಯಸ್ಸನಿಗಿತ್ತು. ನೀವಿಯಸ್ ದೊಡ್ಡ ಕವಿ. 225ರಲ್ಲಿ ಮಾರ್ಸೆಲಸ್ಸನ ವಿಜಯವನ್ನು ಕುರಿತು ನಾಟಕವೊಂದರಲ್ಲಿ ಪ್ರಶಂಸೆಗೈದ. ಅಲ್ಲದೆ ರೋಮ್ಯುಲಸ್ ರೀಮಸ್ಸರ ಕಥೆಯನ್ನು ವಿಷಯವನ್ನಾಗಿಸಿಕೊಂಡು ನಾಟಕ ಕಟ್ಟಿ, ದೇಶೀಯ ವಿಚಾರಗಳನ್ನು ಮಾತ್ರ ಪ್ರತಿಪಾದಿಸುವ ಫ್ಯಾಬ್ಯುಲ ಪ್ರಿಟೆಕಸ್ಟಾ ಎಂಬ ರೂಪಕ ಪ್ರಭೇದಕ್ಕೆ ಮೊಟ್ಟಮೊದಲಿಗನಾದ. ಒಂದನೆಯ ಪ್ಯೂನಿಕ್ ಯುದ್ಧ ಕುರಿತು ಇವನು ಬರೆದ ಕಥನಕಾವ್ಯ ಮುಂದೆ ವರ್ಜಿಲನ ಭವ್ಯಕಾವ್ಯಕ್ಕೆ ಆಕರವಾಯ್ತು. ರೋಮನ್ ಸಾಹಿತ್ಯದ ಜನಕನೆಂದು ನೀವಿಯಸ್ಸನನ್ನು ಪರಿಗಣಿಸಲಾಗುತ್ತದೆ. ಮುಂದೆ ಬಂದ ಕವಿಗಳು ಲೇಖಕರು ಇವನನ್ನು ಆದರ್ಶವಾಗಿಟ್ಟುಕೊಂಡರು. ಕ್ವಿಂಟಸ್ ಎನ್ನಿಯಸ್, ಕೇಟೊ-ಇವರಿಬ್ಬರೂ ರೋಮನ್ ಸಾಹಿತ್ಯವನ್ನು ಎತ್ತರಕ್ಕೆ ಕೊಂಡೊಯ್ದರು. ಕ್ವಿಂಟಸ್ ಎನ್ನಿಯಸ್ (ಕ್ರಿ.ಪೂ. 239-169) ವಿಭಾವನಾಶೀಲ, ರಾಗಾನ್ವಿತ, ಧ್ಯೇಯಾಸಕ್ತ ಕವಿಯಾಗಿದ್ದ. ರೋಮನ್ ಗಾಂಭೀರ್ಯಕ್ಕೆ ಗ್ರೀಕ್ ಗಾಂಭೀರ್ಯವನ್ನು ಸಮಂಜಸವಾಗಿ ಕೂಡಿಸ ಬೇಕೆಂಬುದೇ ಇವನ ಆಶಯವಾಗಿತ್ತು. ಜ್ಞಾನ ತಿಳಿವಳಿಕೆ, ಸೂಕ್ಷ್ಮ ವಿಚಕ್ಷಣೆ ಎಲ್ಲದರಲ್ಲೂ ಶ್ರೇಷ್ಠನಾಗಿದ್ದ ಈತ ಟ್ರ್ಯಾಜಿಡಿಯನ್ನು ಪುನರುತ್ಥಾನಗೊಳಿಸಿದ. ತನ್ಮೂಲಕ ಎತ್ತರದ ಮನೋಭಾವಕ್ಕೂ ಶೀಲಶ್ರದ್ಧೆಗೂ ಪ್ರೆರೇಪಕನಾದ. ಬಿಡುವಾದಾಗ ಹಗುರ ಕಾವ್ಯ ಹಿಡಿಯಲೋಸುಗ ನಾನಾ ಛಂದಸ್ಸಿನಲ್ಲೂ ಸುಲಭ ಮಾತಿನಲ್ಲೂ ಅನೇಕ ಸಣ್ಣಪುಟ್ಟ ಸ್ಯಾಟ್ಯುರಗಳನ್ನು ಬಾಳಿನ ಅನೇಕ ವ್ಯವಹಾರಗಳ ಮೆಲೆ ರಚಿಸಿದ; ಜನರ ಜ್ಞಾನಾರ್ಜನೆಗೆ ಸಹಾಯಕನಾದ. 18 ಸಂಪುಟಗಳ ಕಥನ ಕಾವ್ಯ ಆನಲೆಸ್ ಈತನ ಮೇರುಕೃತಿ. ರೋಮಿನ ಚರಿತ್ರೆಯನ್ನು ವಾಸ್ತವಿಕ ವಿವರಗಳಿಂದಲೂ ಆದರ್ಶದ ಆಕಾಂಕ್ಷೆಯಿಂದಲೂ ಪ್ರಭಾವಯುಕ್ತವಾಗಿ ಇದರಲ್ಲಿ ವರ್ಣಿಸಿದ್ದಾನೆ. ಇವನು ಬಳಸಿದ ಪದ್ಯಪಂಕ್ತಿ (ಡ್ಯಾಕ್ಟಿಲಿಕ್ ಹೆಕ್ಸಾಮೀಟರ್) ಮುಂದೆ ರೂಢಿಸಲ್ಪಟ್ಟು ಲ್ಯಾಟಿನ್ನಿನ ಮುಖ್ಯ ಪದ್ಯಪಂಕ್ತಿಯಾಯ್ತು. ವ್ಯಾಕರಣದ ಮೇಲೂ ಛಂದಶ್ಯಾಸ್ತ್ರದ ಮೇಲೂ ಈತ ಕೈಪಿಡಿ ಬರೆದು ಮುಂದಿನ ಪೀಳಿಗೆಗೆ ಮಹದುಪಕಾರಮಾಡಿದ. ನೀವಿಯಸ್ ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅನುಸರಿಸಿ ಪ್ಲಾಟಸ್ (ಕ್ರಿಪೂ 254-184) ವಿನೋದಕರ ನಾಟಕಗಳನ್ನು ರಚಿಸಿದ. ಇವನ ಇಪ್ಪತ್ತು ಕಾಮಿಡಿಗಳು ಲಭ್ಯವಾಗಿದ್ದು ಇವು ಆರಂಭದ ಲ್ಯಾಟಿನ್ ಕಾಮಿಡಿಯನ್ನು ಕುರಿತು ಅರ್ಥಮಾಡಿಕೊಳ್ಳಲು ಸಹಾಯಕ ವಾಗಿವೆ. ಗ್ರೀಕ್ ಕಾಮಿಡಿಗಳನ್ನು ಅನುಸರಿಸಿ ಇವು ರಚಿತವಾಗಿದ್ದರೂ ಇವುಗಳಲ್ಲಿ ಇಟಾಲಿಯನ್ ಅಭಿರುಚಿಯನ್ನು ಗುರುತಿಸಬಹುದಾಗಿದೆ. ಪೋರ್ಸಿಯಸ್ ಕೇಟೊ (ಕ್ರಿ.ಪೂ. 234-149) ರೋಮನ್ ಸಾಹಿತ್ಯದ ನಿರ್ಮಾಪಕರಲ್ಲಿ ಮುಖ್ಯನಾದವ. ನೀವಿಯಸ್, ಪ್ಲಾಟಸರಿಗಿಂತಲೂ ಹೆಚ್ಚಾಗಿ ಈತ ಸ್ವದೇಶೀಯತೆಯ ಪ್ರೇಮಿ. ಲ್ಯಾಟಿಯಮ್ಮಿನ ಸ್ವಂತ ಸ್ವಭಾವ ಗುಣಶೀಲಗಳನ್ನು ಎತ್ತಿಹಿಡಿಯು ವುದೇ ಇವನ ಉದ್ದೇಶ ವಾಗಿತ್ತು. ತಾನು ಸಾಮಾನ್ಯ ಜನರ ಪ್ರತಿನಿಧಿ ಎಂದು ತಿಳಿದುಕೊಂಡಿದ್ದ ಇವನಿಗೆ ಸಾಹಿತ್ಯ ಕಲಾಬದ್ಧ ವಾಗಿರಬೇಕು, ರಸಾತ್ಮಕವಾಗಿರಬೇಕು, ಆನಂದದಾಯಕವಾಗಿರಬೇಕು ಎಂಬ ಅಭಿಪ್ರಾಯ ಹಿಡಿಸಲಿಲ್ಲ. ಸಾಹಿತ್ಯ ರಾಜಕೀಯದ ಅಡಿಯಾಳಾಗಿರತಕ್ಕದ್ದು, ಬಾಳಿಗೆ ಉಪಯುಕ್ತವಾಗಿರ ತಕ್ಕದ್ದು ಎಂಬ ಪ್ರಮಾಣವನ್ನು ಇಟ್ಟುಕೊಂಡು ಈತ ಗದ್ಯ ಮಾರ್ಗವನ್ನೇ ಹಿಂಬಾಲಿಸಿದ. ಭಾಷಣಗಳನ್ನು ಪ್ರಕಟಿಸುವ ಪದ್ಧತಿಗೆ ಮೇಲ್ಪಂಕ್ತಿ ಹಾಕಿದ. ಸಿಸಿರೊನ ಕಾಲದಲ್ಲೂ ಇವನ 150 ಭಾಷಣಗಳು ಪ್ರಚಾರದಲ್ಲಿದ್ದುವಂತೆ. ಚುರುಕು ಬುದ್ಧಿ, ಮೊನಚು, ಸಂಕ್ಷಿಪ್ತತೆ ಇವನ ಲೇಖನದ ಲಕ್ಷಣ; ಮುಪ್ಪಿನಲ್ಲಿ ಇವನು ಬರೆದ “ಮೂಲಗಳು”ಎಂಬ ಕೃತಿ ಚರಿತ್ರೆಯ ವಿಷಯವಾಗಿ ರೋಮನರಿಗಿದ್ದ ಮುದ್ದಾಗಿ ಪ್ರಕಾಶ ಪಡಿಸುತ್ತದೆ. ಘಟನೆ ಘಟನಾವಳಿಗಳು ಇರುವುದು ಕಾರಣಗಳ ಪ್ರಕಟನೆಗಲ್ಲ, ಮಾನವ ಸ್ವಭಾವದ ತೋರ್ಕೆಗಲ್ಲ, ರಾಷ್ಟ್ರದ ಮುನ್ನಡೆ ಪ್ರಗತಿಗಳ ಸಲುವಾಗಿ ಎಂದು ಈತ ಅಭಿಪ್ರಾಯಪಟ್ಟ. ಮುಂದೆ ಬಂದ ಲಿವಿಟ್ಯಾಸಿಟಸ್ಸರ ಅಭಿಪ್ರಾಯವೂ ಇದೇ ಆಗಿದೆ. ರೋಮನ್ನರ ವೈಭವದ ಆಖ್ಯಾನದಲ್ಲಿ ಇಟಲಿಯ ಸಮಸ್ತ ಬುಡಕಟ್ಟುಗಳಿಗೂ ಸ್ಥಾನ ಮರ್ಯಾದೆ ಇರಬೇಕೆಂಬುದು ಇವನ ಸೂತ್ರವಾಗಿತ್ತು. ಇಲ್ಲದಿದ್ದರೆ ಆ ವೈಭವ ಅಪೂರ್ಣವಾದುದು ಎಂಬುದು ಇವನ ಅಭಿಪ್ರಾಯವಾಗಿತ್ತು. ಇದೇ ಅಭಿಮತದಿಂದ ವರ್ಜಿಲ್ ತನ್ನ ಕಾವ್ಯವನ್ನು ಭವ್ಯಗೊಳಿಸಿದ ಇಟಲಿಯ ಗ್ರಾಮಾಂತರ ಜೀವನದ ಬಗೆಗೆ ಇಬ್ಬರಿಗೂ ಕುತೂಹಲವಿತ್ತು. ಆ ಜೀವನದ ಸರಳ ಸುಂದರ ಮೋಹಕತೆ ವರ್ಜಿಲನ ಜಾರ್ಜಿಕ್ಸ್‍ನಲ್ಲಿ ಮೂಡಿಬಂದಿದ್ದರೆ ಕೇಟೋವಿನ ಡರಿರಸ್ಟಿಕದಲ್ಲಿ ಅದರ ವ್ಯಾವಹಾರಿಕತೆ, ಕರ್ಮತ್ವ, ಗದ್ಯತನ ಕಾಣಬರುತ್ತದೆ. ಅನಂತರ ಸಿಸಿಲಿಯಸ್ ಸ್ಟ್ಯಾಟಿಯಸ್, ಪಾಕೂವಿಯಸ್ ಆಕ್ಸಿಯಸ್, ಗಾಲಸ್ ಮೊದಲಾದವರಿಂದ ಕಾವ್ಯ ನಿರ್ಮಾಣಕಾರ್ಯ ಮುಂದುವರಿಯಿತು. ಈ ಕಾಲದಲ್ಲಿ ಪ್ರಖ್ಯಾತಿ ಪಡೆದ ಇಬ್ಬರು ಲೇಖಕರೆಂದರೆ ಟೆರೆನ್ಸ್ ಮತ್ತು ಲ್ಯೂಸಿಲಿಯಟೆರೆನ್ಸ್ (ಕ್ರಿ.ಪೂ. 195-159?) ವಿನೋದ ನಾಟಕವನ್ನು ಭಾಷೆ ಶೈಲಿಗಳ ವಿಚಾರದಲ್ಲಿ ಬಹಳ ಮೇಲಕ್ಕೆ ಎತ್ತಿದ; ಆದರೆ ಭಾವ ಭಾವನೆಗಳ ವಿಚಾರದಲ್ಲಿ ದಿಟವಾಗಿ ಕೆಳಕ್ಕಿಳಿಸಿದ. ಸಿಪಿಯೋ ಕೇಂದ್ರವಾಗಿದ್ದ ಸಾಂಸ್ಕøತಿಕ ಗುಂಪೊಂದು ಆಗ ಆಕರ್ಷಕವಾಗಿತ್ತು; ಟೆರೆನ್ಸ್ ಆ ಗುಂಪಿಗೆ ಸೇರಿದವನಾಗಿದ್ದ. ಹಿಂದಣ ತೀಕ್ಷ್ಣ ದೇಶೀಯತೆಯೂ ಸ್ವಲ್ಪ ಒಡ್ಡೊಡ್ಡಾದ ನೇರತನವೂ ಬದಿಗೆ ತಳ್ಳಲ್ಪಟ್ಟು ನಯ ವಿನಯ ಸಂಸ್ಕøತಿಯಪೇಕ್ಷೆ ಘನ ಧ್ಯೇಯಗಳಿಂದ ಉಂಟಾದ ಸಭ್ಯತೆ ಸಜ್ಜನಿಕೆಯ ಪ್ರಧಾನ ಲಾಂಛನವೆಂದೆನಿಸಿತು. ಲ್ಯಾಟಿನ್ನನ್ನು ಶುದ್ಧವಾಗಿ ಇಡುವ ಕೆಲಸ ಅತ್ಮಗೌರವೊಂದೇ ಅಲ್ಲದೆ ದೇಶಪ್ರೇಮವೂ ಆಗಿ ತೋರಿತು. ಸಾಹಿತ್ಯ ಜನತೆಯ ಸಂಪರ್ಕದಿಂದ ದೂರ ದೂರ ಸರಿಯುತ್ತ ಹೋಯ್ತು. ಸೆನೆಟ್ ಮಂಡಲಿಯ ಪ್ರಾಧಾನ್ಯವೂ ಕುಲೀನ ಶ್ರೀಮಂತರ ಅಹಂಕಾರವೂ ಜನಸಾಮಾನ್ಯರ ಕಷ್ಟ ನಿಷ್ಠೂರವೂ ಹೆಚ್ಚುತ್ತ ಬಂದು ಪ್ರತಿಭಟನೆಯೇ ಅಲ್ಲದೆ ದಂಗೆಯೇಳುವ ಚಿತ್ತ ಹಲವರಲ್ಲಿ ಮಿಡುಕಾಡಲಾರಂಭಿಸಿತು. ಕಕ್ಷಿ ಪ್ರತಿಕಕ್ಷಿಗಳ ಹೋರಾಟದಿಂದ ಪರಿಸ್ಥಿತಿ ರಾಡಿಯಾಗಿ ರಾದ್ಧಾಂತಗೊಂಡಿತು. ಹಿಂದೆಯೂ ಆಗಾಗ ತಲೆದೋರುತ್ತಿದ್ದ ವಿಡಂಬನೆಗೆ ಈಗ ಹೇರಳ ಸಾಮಗ್ರಿ ದೊರಕಿತು; ಅವಕಾಶ ಕಲ್ಪಿತವಾಯ್ತು. ಇಂಥ ಹೊತ್ತಿನಲ್ಲಿ ಲ್ಯೂಸಿಲಿಯಸ್ (ಕ್ರಿ.ಪೂ. 180-102?) ಉದಯಿಸಿದ. ಸರ್ಮನ್ಸ್ ಎಂಬ ತನ್ನ ಅನಿರ್ಬಂಧ ಪ್ರವಚನಗಳಲ್ಲಿ ತನ್ನ ಮತ್ತು ತನ್ನ ಮಿತ್ರರ ಬದುಕಿನ ಘಟನೆಗಳನ್ನೂ ಪ್ರಯಾಣ ಔತಣ ಸಾಹಿತ್ಯ ಚರ್ಚೆ ಮುಂತಾದವನ್ನೂ ಆಧಾರ ವಾಗಿರಿಸಿಕೊಂಡು, ಲೇಖಕರ ಮತ್ತು ದೊಡ್ಡ ವ್ಯಕ್ತಿಗಳ ಲೋಪದೋಷಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿ ವಿಡಂಬನವೆಂಬ ಸಾಹಿತ್ಯಪ್ರಕಾರವನ್ನು ನಿರ್ಮಿಸಿದ. ವಿಡಂಬನ ಸಾಹಿತ್ಯದ ಜನಕನೆಂದು ಖ್ಯಾತಿಗಳಿಸಿದ ಇವನು ಮೂವತ್ತು ಪುಸ್ತಕಗಳನ್ನು ರಚಿಸಿದ್ದಾನೆ.

ಕ್ರಿ ಪೂ 166ರಲ್ಲಿ 1000 ಗ್ರೀಕ್ ಪ್ರಜೆಗಳನ್ನು ಇಟಲಿಗೆ ರವಾನಿಸ ಲಾಯ್ತು. ಅವರಲ್ಲಿ ಶ್ರೇಷ್ಠ ಚರಿತ್ರಕಾರ ಪಾಲಿಬಿಯಸ್ಸನೂ ಒಬ್ಬ. ಕ್ರಿ.ಪೂ. 155ರಲ್ಲಿ ಅಥೆನ್ಸಿನಿಂದ ಒಂದು ನಿಯೋಗ ರೋಮಿಗೆ ಬಂತು; ಅದರ ಮುಖಂಡರಾಗಿದ್ದವರು ದಾರ್ಶನಿಕರಾದ ಕಾರ್ಮಿಯಾಡಿಸ್, ಡಯೊಜಿನೀಸ್ ಮತ್ತು ಕ್ರಿಟೋಲಾಸ್. ಇವರ ಮೂಲಕ ಗ್ರೀಸಿನ ನಾನಾ ತತ್ತ್ವಶಾಸ್ತ್ರ ಪಂಥಗಳ ಅಧ್ಯಯನ ರೋಮನರಲ್ಲಿ ಮೊದಲಾಯ್ತು. ಹೀಗೆ ಕ್ರಿ.ಪೂ. 2ನೆಯ ಶತಮಾನದಲ್ಲಿ ರೋಮ್ ಅನೇಕ ರಾಷ್ಟ್ರಗಳ ಯಾಜಮಾನ್ಯವನ್ನುಗಳಿಸಿಕೊಂಡಿತು; ಕ್ರಿ.ಪೂ. 133ರ ಹೊತ್ತಿಗೆ ಸ್ಪೇನ್ ಅದಕ್ಕೆ ಅಧಿನವಾಯ್ತು. ಕ್ರಿ.ಪೂ. 120ರಲ್ಲಿ ಗಾಲಿಯಾ ಕೈವಶವಾದಾಗ ರೋಮಿನ ರಾಜ್ಯವಿಸ್ತರಣ ಒಂದು ಮಹಾ ವೈಶಾಲ್ಯದಿಂದ ಶೋಭಿಸಲಾರಂಭಿಸಿತು.

ಆ ಕಾಲದಲ್ಲಿ ವಾಗ್‍ವಿದ್ಯೆಗೆ (ರೆಟೊರಿಕ್ಸ್) ತುಂಬ ಪುರಸ್ಕಾರ ಇದ್ದಿತಾಗಿ ಕೇಟೋವಿನ ತರುವಾಯ ಬಂದ ಸಿಪಿಯೊ, ಲೀಲಿಯಸ್, ಗ್ರಾಕೈಸೋದರರು, ಕ್ರಾಸಸ್, ಆಂಟೋನಿಯಸ್ ಮೊದಲಾದವರು ಹೆಸರು ಸಂಪಾದಿಸಿದರು.

ಎರಡನೆಯ ಅವಧಿ (ಕ್ರಿ.ಪೂ. ಸು 80-30): ಗಣರಾಜ್ಯದ ಕಡೆಯ ಭಾಗವೂ ರೋಮನ್ ಸಾಹಿತ್ಯದ ಸುವರ್ಣಯುಗದ ಮೊದಲರ್ಧವೂ ಒಂದೇ ಆಗಿದೆ. ಇದಕ್ಕೆ ಸಿಸಿರೊ ಕಾಲ ಎಂಬ ಪರ್ಯಾಯನಾಮವೂ ಉಂಟು. ಗದ್ಯದ ಪರಿಶುದ್ಧ ಪರಮೋನ್ನತಿ, ಪದ್ಯದ ಹೊಸತನ ಎರಡೂ ಈ ಕಾಲದ ಮುಖ್ಯಸಾಧನೆ. ಸಿಸಿರೊ, ಸೀಸರ್, ಸ್ಯಾಲಸ್ಟ್, ಲ್ಯುಕ್ರೀಷಿಯಸ್ ಮತ್ತು ಕ್ಯಾಟಲಸ್-ಈ ಐವರು ಲ್ಯಾಟಿನ್ ಕ್ಲ್ಯಾಸಿಕಲ್ ಸಾಹಿತ್ಯದ ಪಂಚರತ್ನಗಳೆಂದು ಪ್ರಸಿದ್ಧರಾಗಿದ್ದಾರೆ. ಇತರ ಗದ್ಯಲೇಖಕರಾದ ವ್ಯಾರೊ, ಕಾರ್ನೀಲಿಯಸ್, ನೇಪಾಸ್ ಮೊದಲಾದವರ ಬರೆಹವು ಗಮರ್ನಾಹ ವಾಗಿದೆ. ಈ ಕಾಲದಲ್ಲಿ ವಿದ್ಯಾವಂತ ಓದುಗರ ಸಂಖ್ಯೆ ಬೆಳೆಯುತ್ತಾ ಬಂತು. ಆದ್ದರಿಂದ ಭಾಷಣಗಳು ಕೇಳುಗರಿಗೋಸ್ಕರವೇ ಅಲ್ಲದೆ ಓದಗರಿಗೋಸ್ಕರವೂ ರಚನೆಗೊಂಡುವು.
ಗದ್ಯಲೇಖಕರಲ್ಲಿ ಸಿಸಿರೊನ (ಕ್ರಿ.ಪೂ. 106-43) ಸ್ಥಾನ ಅದ್ವಿತೀಯ ವಾದದ್ದು. ರೋಮಿನ ನ್ಯಾಯಾಲಯಗಳು ಆಸ್ತಿಪಾಸ್ತಿ ಮೋಸ ದರೋಡೆ ಇತ್ಯಾದಿ ತಕ್ಸೀರುಗಳನಲ್ಲದೆ ಪ್ರಾಂತಗಳ ಯೋಗಕ್ಷೇಮ ರಾಷ್ಟ್ರದ ಗೌರವ ಮತ್ತು ರಕ್ಷಣೆ ಇತ್ಯಾದಿ ಭಾರಿ ಸಮಸ್ಯೆಗಳನ್ನು ವಿಚಾರಿಸಿಕೊಳ್ಳ ಬೇಕಾಗಿತ್ತು. ವಾದ ವಿವಾದ ಮಾಡುವವರು ದೇಶಭಕ್ತರಾಗಿ ವ್ಯವಹಾರ ಬಲ್ಲವರಾಗಿ ಭೂತದಯೆಯಿಂದ ಕೂಡಿದವರಾಗಿ ಪಾಂಡಿತ್ಯವುಳ್ಳವರೂ ತತ್ತ್ವಜ್ಞರೂ ಆಗಿರಬೇಕಾಗಿತ್ತು. ಆ ಗುಣಗಳಲ್ಲಿ ಸಿಸಿರೊವನ್ನು ಮೀರಿಸ ಬಲ್ಲವರು ಯಾರೂ ಇರಲಿಲ್ಲ. ನೀತಿಧರ್ಮ ಇವನಿಗೆ ಬಲುಮುಖ್ಯವಾದ ವಿಷಯ. ದುಷ್ಟರ ಖಂಡನದಲ್ಲೂ ಶಿಷ್ಟರ ಮಂಡನದಲ್ಲೂ ಇವನು ನಿಸ್ಸೀಮ. ಕವಿಯ ವಿಭಾವನಾಶಕ್ತಿ ನಾಟಕಕಾರನ ವ್ಯಕ್ತಿಕಲ್ಪನೆ ಭಾಷಾ ಸಮೃದ್ಧಿ ಎಲ್ಲದರಲ್ಲೂ ಇವನು ಅತ್ಯಂತ ಸುಷ್ಠು. ಇವನ ಭಾಷಣಗಳು ರೂಪಿಸಿ ನಿಲ್ಲಿಸಿರುವ ವೆರ್ರೀಸ್, ಕ್ಯಾಟಿಲೀನ್ ಆಂಟೊನಿ ಎಲ್ಲರೂ ಪ್ರಾಚೀನ ರೋಮಿನ ಮಾದರಿ ಮಾನವರು, ಚಿರಂಜೀವಿಗಳು. ಲ್ಯಾಟಿನ್ ಶೈಲಿಗೆ ಇವನೇ ಸ್ವಾಮಿ. ಸಿಸಿರೊವಿನ ಬರೆಹ ಲ್ಯಾಟಿನ್ ಅಲ್ಲ; ರೋಮನ್ ಎಂಬ ಹೊಗಳಿಕೆಗೆ ಈತ ಪಾತ್ರನಾದ. ತತ್ತ್ವಪ್ರತಿಪಾದನೆಯಲ್ಲೂ ಇವನು ನಿಪುಣ; ವಿಮರ್ಶೆಯಲ್ಲೂ ದೊಡ್ಡವ. ಇವನ ಕುಶಲಪತ್ರಗಳು ಸಹಜ ಪ್ರಾಮಾಣಿಕ ಸಮಂಜಸ ಅಭಿವ್ಯಕ್ತಿಯಿಂದ ಉತ್ತಮ ಸಾಹಿತ್ಯವಾಗಿವೆ.

ಸಿಸಿರೊವಿನೊಡನೆ ಪೈಪೋಟಿ ಮಾಡುತ್ತಿದ್ದ ಅನೇಕ ವಾಗ್ಮಿಗಳಲ್ಲಿ ಹಾರ್ಟೆನ್ಸಿಯಸ್ ಮತ್ತು ಜೂಲಿಯಸ್ ಸೀಸರ್ ಮುಖ್ಯಸ್ಥರು. ಹಾರ್ಟೆನ್ಸಿಯಸ್ ಸಾಹಿತ್ಯದ ಹವ್ಯಾಸಿಯಾಗಿದ್ದ. ಖುಷಿಗಾಗಿ ಇವನ ಬರವಣಿಗೆ. ಸೀಸರ್ (ಕ್ರಿ ಪೂ 100-44) ಋಜು ಮನುಷ್ಯ, ಋಜು ಲೇಖಕ. ವ್ಯಾಖ್ಯಾನಗಳು ಎಂಬುದರಲ್ಲಿ ವಾಗಲಂಕಾರಗಳನ್ನು ಪೂರ್ತಿ ಪರಿತ್ಯಜಿಸಿ, ನೇರವೂ ಸ್ಪಷ್ಟವೂ ಆದ ಕಥನಶೈಲಿಯನ್ನು ರೂಢಿಗೆ ತಂದ. ಅನವಶ್ಯಕವಾದ ಒಂದು ಶಬ್ದವೂ ಇವನಲ್ಲಿ ಇಲ್ಲ. ರಾಗಾತಿರೇಕ ಕ್ಕಾಗಲಿ ವರ್ಣನಾವೈಖರಿಗಾಗಲಿ ಎಡೆಗೊಡದಿದ್ದರೂ ಸರಳ ವಾಕ್ಯಸರಣಿ ಯಿಂದ ಓದುಗರ ಮನವೊಪ್ಪಿಸುತ್ತಾನೆ. ಸೀಸರನ ರೀತಿಗೆ ವಿರುದ್ಧವಾದ ಸಾಲಂಕೃತ ರೀತಿ ಸ್ಯಾಲಸ್ಟ್ (ಕ್ರಿ.ಪೂ. 86-34) ಎಂಬ ಚರಿತ್ರಕಾರನದು. ಚರಿತ್ರೆಯನ್ನು ಕಲಾತ್ಮಕವಾಗಿ ಮಾಡಿದವರಲ್ಲಿ ಇವನು ಮೊದಲನೆಯಾತ; ಆದ್ದರಿಂದ ಇವನ ವರದಿಯೆಲ್ಲವೂ ನಿಷ್ಪಕ್ಷಪಾತ ಎನ್ನಲಾಗುವುದಿಲ್ಲ. ಹೇಳಿಕೆ ಸತ್ಯಾಂಶಕ್ಕಿಂತ ಹೇಳುವ ಬಗೆಯ ಸೊಗಸು ಇವನಿಗೆ ಪ್ರಿಯವಾಗಿತ್ತು. ಅರ್ಥಗರ್ಭಿತವೂ ಸಾರೋಕ್ತಿಪೂರ್ಣವೂ ಪ್ರಾಚೀನ ಪ್ರಯೋಗ ನಿಬಿಡವೂ ಆದದ್ದು ಇವನ ಶೈಲಿ ಆದರೂ ಇವನು ಚಿತ್ರಿಸಿರುವ ವ್ಯಕ್ತಿಗಳು ಮನನಯೋಗ್ಯ.

ರೋಮನರ ಮನಸ್ಸು ಸದಾ ಕಾಳಗ, ರಾಜಕೀಯ ಹೋರಾಟಗಳ ಕಡೆಗೆ ಹೆಚ್ಚು ವಾಲಿದ್ದಿತಾಗಿ ಗದ್ಯಕಾವ್ಯ ಅವರಿಗೆ ಅತ್ಯಗತ್ಯವಾಗಿತ್ತು. ಆದರೂ ಪದ್ಯಕಾವ್ಯಕ್ಕೆ ಮಿಸಲಾದವರು ಇರಲಿಲ್ಲಿವೆನ್ನಲಾಗದು. ಲ್ಯುಕ್ರೀಷಿಯಸ್ (ಕ್ರಿ.ಪೂ. 94-55?) ಸಾರ್ವಜನಿಕ ವ್ಯಾಪಾರಗಳಿಂದ ಬಾಹಿರನಾಗಿ ಅಂತರ್ಮುಖಿಯಾಗಿ ಗಾಢ ವಿಷಯಗಳ ಧ್ಯಾನ ಮನನ ಚಿಂತನದಲ್ಲಿ ಮಗ್ನನಾಗಿದ್ದ; ಪ್ರಕೃತಿಯನ್ನು ನೋಡಿ ಅನುಭವಿಸಿ ಅವುಗಳ ಹಿಂದಿರುವ ನಿಯಮಗಳನ್ನು ವಿಚಾರಿಸಿ ಅರಿತುಕೊಳ್ಳುವುದೂ ಮನುಷ್ಯ ಜೀವನದ ಪ್ರಶ್ನೆಗಳನ್ನು ಕುರಿತು ವಿಭಾವನಾಪೂರ್ವಕ ಲೋಚಿಸುವುದೂ ಇವನ ಕೆಲಸವಾಗಿತ್ತು. ಇವನಲ್ಲಿ ಗ್ರೀಕ್ ದರ್ಶನ ವಿಜ್ಞಾನಗಳ ಪರಿಚಯ ಯಥೇಚ್ಛವಾಗಿತ್ತು. ಗ್ರೀಕ್ ಗ್ರಂಥದ ಮಾದರಿಯಲ್ಲೇ “ದ್ರವ್ಯಗಳ ಲಕ್ಷಣ” ಎಂಬ ತನ್ನ ಮೇರುಕೃತಿಯನ್ನು ವಿರಚನೆ ಮಾಡಿದ. ಅನೇಕ ವಿಷಯ ಗ್ರೀಕರಿಂದ ಎರವಲು ತಂದದ್ದಾದರೂ ಅವುಗಳನ್ನು ಮಾನವೀಯ ವಾಗಿಯೂ ಕಾವ್ಯಮಯವಾಗಿಯೂ ಪರಿವರ್ತನಗೊಳಿಸಿದ್ದು ಇವನ ಹೆಗ್ಗಳಿಕೆ. ಭಾಷೆಯ ಸೌಂದರ್ಯವೇನೆಂಬುದನ್ನು ಹೋಮರ್, ಯೂರಿಪಿಡೀಸರಿಂದ ಇವನು ಕಲಿತಿದ್ದರೂ ಭಾಷೆಯ ಶಕ್ತಿ ಸಾಮಥ್ರ್ಯದ ಕಡೆಗೇ ಇವನ ಮನಸ್ಸು ಸರಿಯುತ್ತಿತ್ತು. ಅರ್ಥಗರ್ಭಿತವಾದ ಅಂಥ ಪ್ರೌಢಕಾವ್ಯ ಪ್ರಪಂಚದ ಸಾಹಿತ್ಯದಲ್ಲಿಯೇ ಅಪರೂಪವೆನ್ನಬಹುದು. ಇವನ ಶಬ್ದಜಾಲಕ್ಕೆ ಹೊಸಸೃಷ್ಟಿಯ ತೇಜಸ್ಸಿದೆ; ವಾಕ್ಯವೃಂದಕ್ಕೆ ಮೋಹಕ ಲಯಬದ್ಧತೆಯಿದೆ.

ಆ ಕಾಲದ ಯುವ ಕವಿಗಳ ಪಂಗಡದಲ್ಲಿ ಉಳಿದು ಬಂದಿರುವ ಇನ್ನೊಂದು ಹೆಸರು. ವ್ಯಾಲಿರಿಯಸ್ ಕ್ಯಾಟಲಸ್ (ಕ್ರಿ.ಪೂ. 84-54). ಪ್ರಚಂಡ ಬಿರುಗಾಳಿಯ ಹಾಗೆ ಇವನು ಸಮಕಾಲೀನ ರೋಮನರ ಮೇಲೆ ಬೀಸಿಬಂದ. ಅಷ್ಟೇನೂ ಗರತಿಯಲ್ಲದ ಕ್ಲೋಡಿಯಾ ಎಂಬ ಸಮಾಜಸುಂದರಿಯ ಮೋಹಕ್ಕೆ ಸಿಕಿಬಿದ್ದು, ಅವಳಿಗೆ ಲೆಸ್ಬಿಯಾ ಎಂಬ ಕಾವ್ಯನಾಮವನ್ನಿಟ್ಟು, ಅತ್ಯಂತ ರಮಣೀಯವಾದ ಪ್ರಣಯಗೀತಗಳನ್ನು ಈತ ಕಟ್ಟಿದ. ಅವುಗಳಿಗೆ ಸಮವಾದ ಕವಿತೆಯನ್ನು ನಾವು ನೋಡಬೇಕಾದ ರೆ ಪ್ರಾಚೀನ ಆಲ್ಕಿಯಸ್ ಸ್ಯಾಫೊ ಬಳಿಗೆ ಅಥವಾ ಅರ್ವಾಚೀನ ಬರ್ನಸನ ಬಳಿಗೆ ಹೋಗಬೇಕು. ಸ್ವವಿಷಯವೇ ಕ್ಯಾಟಲಸ್ಸನ ಪದ್ಯಗಳ ಸಾಮಗ್ರಿ. ತನ್ನ ಸ್ವಂತ ಆಗುಹೋಗುಗಳನ್ನು, ಪ್ರಣಯ ಪ್ರಯಾಣ ಒಲವು ದ್ವೇಷಗಳನ್ನು ಹೊರಗೆಡಹುವುದೇ ಇವನ ಏಕೈಕ ಉದ್ದೇಶ. ನಿಲ್ಲದೆ ಸರಿದೋಡುವ ಕಾಲದ ಆ ಕ್ಷಣದ ನಲಿವು ನೋವುಗಳನ್ನು ಯಥಾವತ್ತಾಗಿಯೂ ಜೀವಂತವಾಗಿಯೂ ರೂಪಿಸುವ ಕಲಾಮರ್ಮ ಇವನಿಗೆ ತಿಳಿದಿತ್ತು. ಈತ ಗ್ರೀಕ್ ಪುರಾಣ ಕಥಾವಳಿಗೆ ನೂತನ ಚೈತನ್ಯ ತುಂಬಿದ; ನಾನಾ ಛಂದೋಜಾತಿಗಳನ್ನು ನಿರ್ಮಿಸಿದ, ಉಜ್ಜಿ ಬೆಳಗಿದ; ಆಡುನುಡಿಗೆ ಅಪೂರ್ವ ಕಾವ್ಯತ್ವವನ್ನು ಹೊಂದಿಸಿದ; ಮೇಲಾಗಿ ವೈಯಕ್ತಿಕ ವಿಡಂಬನೆಗೆ ಮಾರ್ಗದರ್ಶಿಯಾದ. ಸ್ವತಂತ್ರ ಗಣರಾಜ್ಯದ ಕೊನೆಯ ಸ್ವಚ್ಛಂದ ಕವಿಯಾಗಿ ಕ್ಯಾಟಲಸ್ ಖ್ಯಾತನಾಗಿದ್ದಾನೆ.

ಮೂರನೆಯ ಅವಧಿ (ಕ್ರಿ.ಪೂ. 43- ಕ್ರಿ.ಶ. 17): ಈ ಅವಧಿಗೆ ಅಗಸ್ಟಸ್ ಅವಧಿ ಎಂಬ ನಾಮಾಂಕಿತವೂ ಉಂಟು. ಕ್ಯಾಟಲಿಸ್ ವೃತ್ತದ ಒಬ್ಬಬ್ಬರು ಮುಂದಣ ಅವಧಿಯಲ್ಲಿಯೂ ಬದುಕಿದ್ದುದೇನೊ ದಿಟ; ಆದರೆ ರೋಮನ್ ಸಾಹಿತ್ಯದ ಸ್ವರೂಪವೇ ಇಡಿಯಾಗಿ ಬದಲಾಯಿಸಿದು ದರಿಂದ ಹೊಸ ಭಾವ ಭಾವನೆಗಳ ಹೊಸ ಕವಿಗಳು ಬರಬೇಕಾಯ್ತು. ಆಕ್ಟೇವಿಯನ್ ಸೀಸರ್ ಚಕ್ರವರ್ತಿ ಅಗಸ್ಟಸ್ ಆದಂದಿನಿಂದ ರೋಮ್ ಸಾಮ್ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ, ರಾಷ್ಟ್ರೀಯ ವೈಭವ ಬೇರೂರಿ ಬೆಳೆಯಲಾರಂಭಿಸಿದುವು. ಎಲ್ಲರಲ್ಲೂ ಆಶಾಭಾವ ಸಂತೃಪ್ತಿ ಉತ್ಸಾಹ ತುಂಬಿಕೊಂಡವು. ರಾಜಕೀಯದ ಗೊಂದಲ ಕೊನೆಗೊಂಡದ್ದರಿಂದ ಭಾಷಣ ಚರಿತ್ರೆಗಳ ಸಾಹಿತ್ಯೋದ್ಯಮ ಕುಸಿದು ಬಿತ್ತು. ವಿಡಂಬನ ಸಾಹಿತ್ಯ ವೈಯಕ್ತಿಕವಾಗಿ ಸಂಕುಚಿತವಾಯ್ತು. ರಾಷ್ಟ್ರದ ಚೈತನ್ಯಶಕ್ತಿ ಪದ್ಯಕಾವ್ಯದ ಮೂಲಕ ಪ್ರವಹಿಸಬೇಕಾಯ್ತು. ಆಶ್ರಯದಾತರು ಎಂಬ ಶ್ರೀಮಂತವರ್ಗದಿಂದ ಕವಿಗಳಿಗೆ, ಲೇಖಕರಿಗೆ ಸೌಖ್ಯ ಸವಲತ್ತು ಸಿಕ್ಕುವಂತಾಯ್ತು; ಸಾಹಿತ್ಯವನ್ನೇ ಬದುಕಾಗಿ ಮಾಡಿಕೊಂಡವರ ಸಂಖ್ಯೆ ಬೆಳೆಯುತ್ತ ಬಂತು. ಸ್ವತ: ಅಗಸ್ಟಸ್ಸನೇ ಸಾಹಿತ್ಯಕ್ಕೆ ಪ್ರಮುಖ ಆಶ್ರಯದಾತ ನಾದ. ಹಾಗಾಗಿ ಸಮಯ ಸನ್ನಿವೇಶ ವಾತಾವರಣಗಳೂ ಲವಲವಿಕೆ ಸೂಸುತ್ತ ಪ್ರೋತ್ಸಾಹಕರವಾದುವು. 

ಈ ಕಾಲದಲ್ಲಿ ಬಂದ ಮಹಾಕವಿಗಳಲ್ಲಿ ವರ್ಜಿಲ್ (ಕ್ರಿ.ಪೂ. 70-19) ಬಹುಮುಖ್ಯನಾದವ. ಕಾವ್ಯಪ್ರಭೇದ ಸಂವಿಧಾನ ಅಂಗ ಉಪಾಂಗ ನಿಷ್ಕರ್ಷೆ ಭಾವ ಭಾವನೆ ಲಯ ಗತಿ ಪದಪುಂಜ-ಹೀಗೆ ಕಾವ್ಯಕ್ಕೆ ಸಂಬಂಧಿಸಿದ ಹೆಚ್ಚು ಕಡಿಮೆ ಎಲ್ಲಾ ವಿಚಾರದಲ್ಲೂ ಇವನು ಗ್ರೀಕ್ ಮಾದರಿಯನ್ನು ಹೆಜ್ಚೆ ಹೆಜ್ಚೆಗೆ ಅನುಸರಿಸಿದ. ಆದರೂ ಅದರಲ್ಲಿ ಸ್ವಂತಿಕೆ ಇದೆ. ಥಿಯಾಕ್ರಿಟಸ್‍ನನ್ನು ಅನುಸರಿಸಿ ಈತ ಗ್ರಾಮೀಣ ಕವನಗಳು ಎಂಬ ಪದ್ಯಗಳನ್ನು ರಚಿಸಿದ. ಇಟಲಿಯ ಹಳ್ಳಿಗರ ಕೃಷಿ ಸುಖ ಪ್ರೀತಿ ಪ್ರೇಮಗಳನ್ನು ಉತ್ತಮ ಪದ್ಯ ಪಂಕ್ತಿಗಳಲ್ಲಿ ಸ್ತುತಿಸಿದ. ಆಮೇಲೆ ಬರೆದ ಜಾರ್ಜಿಕ್ಸ್ ಎಂಬ ಕಾವ್ಯ ಇವನ ಆತ್ಮಪ್ರತ್ಯಯವೂ ತನ್ನತನವೂ ಎಷ್ಟು ಬೇಗ ಹೇಗೆ ಕುದುರಿದುವೆಂಬುದಕ್ಕೆ ಸಾಕ್ಷಿಯಾಗಿದೆ. ರೈತಬಾಳಿನ ಸಾಮಾನ್ಯ ವಿವರಗಳಿಗೆ ನಿಸರ್ಗದೇವಿಯ ಕಾರ್ಯಾ ಲಾಪವನ್ನು ಹಿನ್ನೆಲೆಯಾಗಿಸಿ, ಪುರಾಣಕಥೆ ಐತಿಹ್ಯಗಳ ಬೆರಕೆಯಿಂದ ಪುಷ್ಟಿ ತಂದುಕೊಟ್ಟು, ಮಾನವೀಯ ಭಾವಗಳ ಪಾವಿತ್ರ್ಯತೆಯನ್ನು ಎರೆದು ಸುರಮ್ಯ ಕಾವ್ಯವನ್ನಾಗಿಸಿದ. ಇನಿಯಡ್ ಈತನ ಮಹಾಕಾವ್ಯ. ಈ ಭವ್ಯಕಾವ್ಯದಲ್ಲಿ ರಾಷ್ಟ್ರ ವೈಭವವನ್ನು ಆದರ್ಶ ಪ್ರಮಾಣಕ್ಕೆ ಏರಿಸಿ, ಇಟಲಿಯ ಮಹೋನ್ನತಿಗೆ ಕನ್ನಡಿ ಹಿಡಿದು ಪ್ರಥಮ ದರ್ಜೆಯ ಕವಿಗಳಲ್ಲಿ ಒಬ್ಬನಾದ; ಹೋಮರನಿಗೆ ಮಾತ್ರ ಎರಡನೆಯವನು ಎನ್ನಿಸಿಕೊಂಡ ಇವನ ನುಡಿಗಟ್ಟು ಪರಿಪೂರ್ಣತೆಯಿಂದ ಕೂಡಿ ಅನ್ಯಾದೃಶವಾಗಿದೆ; ಲ್ಯಾಟಿನ್ ನುಡಿಯ ಸಕಲ ಸೌಂದರ್ಯವೂ ಅದರಲ್ಲಿ ಉಜ್ವಲವಾಗಿ ಕಂಗೊಳಿಸುತ್ತಿದೆ.

ಘನತೆಯಲ್ಲಿ ವರ್ಜಿಲನಿಗಿಂತ ಕಡಿಮೆಯವನಾದರೂ ಅವನಿಗಿಂತ ಹೆಚ್ಚಾಗಿ ವಿದ್ವಜ್ಜನರಿಗೆ ಅಚ್ಚುಮೆಚ್ಚಾದ ಕವಿಯೆಂದರೆ ಹೊರೇಸ್ (ಕ್ರಿ.ಪೂ 65-8). ಆದರ್ಶ ವಾಸ್ತವಿಕತೆ ಎರಡರಲ್ಲೂ ಇವನು ಗಟ್ಟಿಗ. ಆ ಕಾಲದ ರೋಮನರ ಮನಸ್ಸು ವಚನ ಕಾರ್ಯಾವಳಿಯನ್ನು ಯಥಾವತ್ತಾಗಿ ವೀಕ್ಷಿಸಬೇಕಾದರೆ ಇವನ ವಿಡಂಬನೆಗಳು ಮತ್ತು ಕುಶಲಪತ್ರಗಳು ನಮಗೆ ಉತ್ಕøಷ್ಟ ಸಹಾಯ ನೀಡಬಲ್ಲವು. ರೋಮನರಲ್ಲಿ ಯೋಚನಾಪರ ರಾದವರಿಗೆ ಯಾವ ಮಹದಾಲೋಚನೆ, ತೀಕ್ಷ್ಣರಾಗ, ಕಮನೀಯತೆಗಳೂ ಆಕರ್ಷಕವಾಗಿದ್ದುವೆಂಬುದನ್ನು ಅರಿತುಕೊಳ್ಳಬೇಕಾದರೆ ಹೊರೇಸನ ಗೀತಕಾವ್ಯಗಳ ಪರಿಶ್ರಮ ಅಗತ್ಯ. ಕ್ರಿ.ಪೂ. ಸು. 38ರಲ್ಲಿ ವರ್ಜಿಲ್ ಮತ್ತು ರೂಫಸರ ನೆರವಿನಿಂದ ಇವನಿಗೆ ಮೀಕಿನಾಸನ ಪರಿಚಯ, ಸ್ನೇಹ ಉಂಟಾಯ್ತು. ಐದು ವರ್ಷದ ಅನಂತರ ಮೀಕಿನಾಸನ ಅನುಗ್ರಹದಿಂದ ಟೈಬರ್ ದಂಡೆಯಲ್ಲಿದ್ದ ಒಂದು ಜಮೀನು ಮನೆ ದೊರೆಕಿತು; ಇವನ ಜೀವನ ಸುಗಮವಾಗಿ ನಡೆಯುವುದಕ್ಕೆ ಸಾಧ್ಯವಾಯಿತು. ಉತ್ಕøಷ್ಟ ಪ್ರಗಾಥಗಳನ್ನು ಬರೆದ. ಕುಶಲಪತ್ರದ ರೂಪದಲ್ಲಿ ಒಳ್ಳೆಯ ಸಾಹಿತ್ಯ ವಿಮರ್ಶೆಯನ್ನೂ ಒದಗಿಸಿದ. ವಿಪರೀತಕ್ಕೆ ಹೋಗದ ಮಧ್ಯಮತೆಯೂ ನಯನಾಜೂಕು ಶೈಲಿಯೂ ಇವನ ಬರೆವಣಿಗೆಯ ಮುಖ್ಯಲಕ್ಷಣ. ಇವನ ಅನೇಕ ಪದಪುಂಜಗಳು ಬಳಕೆಯ ಮಾತುಗಳಾಗಿಬಿಟ್ಟಿವೆ; ಅವುಗಳನ್ನು ಬದಲಾಯಿಸಲಾಗುವುದಿಲ್ಲ, ಮರೆಯಲಾಗುವುದಿಲ್ಲ. ಇವನು ಬರೆದ ಕಾವ್ಯಕಲೆ (ಆರ್ಟ್ ಆಫ್ ಪೊಯಿಟ್ರಿ) ಎಂಬ ಗ್ರಂಥ ಅನಂತರ ಕಾಲದ ಕಾವ್ಯಮೀಮಾಂಸೆಯ ಮೇಲೆ ಗಾಢವಾದ ಪ್ರಭಾವ ಬೀರಿದ ಮುಖ್ಯ ಕೃತಿಯಾಗಿದೆ.

ಕೆಲವು ಕವಿಗಳಿಗೆ ಗ್ರೀಕರ ಎಲಿಜಿ ಎಂಬ ಪದ್ಯಕಾವ್ಯ ತಕ್ಕುದಾಗಿ ಕಂಡುಬಂತು. ಎಲಿಜಿ ಮೊದಲು ಶೋಕಗೀತವಾಗಿದ್ದು, ಆಮೇಲೆ 6 ಗಣದ ಒಂದು ಸಾಲೂ 5 ಗಣದ ಒಂದು ಸಾಲೂ ಜೊತೆಯಾಗಿ ಉಂಟಾದ ದ್ವಿಪದಿಯಾಯ್ತು. ಅದನ್ನು ಎಲ್ಲ ವಿಧದ ಸ್ವಂತ ಭಾವ ಭಾವನೆಯ ಅಭಿವ್ಯಕ್ತಿಗೂ ಉಪಯೋಗಿಸಬಹುದಾಗಿತ್ತು. ಉಪದೇಶ ಪ್ರೇಮಾಲಾಪ ಚಿಂತನೆ ಚಿಂತೆ ಯಾವುದಾದರೂ ಅದಕ್ಕೆ ವಿಷಯ ಸಾಮಗ್ರಿಯಾಗಬಹುದಿತ್ತು. ಎಲಿಜಿಗಳನ್ನು ಬರೆದವರಲ್ಲಿ ಮೂವರನ್ನು ಹೆಸರಿಸಬಹುದು. ಟೈಬ್ಯುಲಸ್ (ಕ್ರಿ.ಪೂ.48?-19) ಪ್ರೇಮವನ್ನು ವಸ್ತುವಾಗಿ ಇರಿಸಿಕೊಂಡ; ಸಂತೋಷಗಳಿಗಿಂತ ಹೆಚ್ಚಾಗಿ ಆಲೋಚನಾ ಯುಕ್ತ ದುಗುಡವನ್ನು ಈತ ಬಣ್ಣಿಸಿದ. ಜೀವನದ ಒರಟುತನದಿಂದ ತಪ್ಪಿಸಿಕೊಳ್ಳುವುದೇ ಇವನ ಸತತ ಪ್ರಯತ್ನವಾಗಿತ್ತು. ಪ್ರಾಪರ್ಟಿಯಸ್ (ಕ್ರಿ.ಪೂ.ಸು. 50-15?) ಹೋರಾಟದ ಬದುಕಿನವ. ಸಿನ್ತಿಯಾ ಇವನ ಪ್ರೇಯಸಿ; ಇವಳನ್ನು ಕುರಿತೇ ಇವನ ಪ್ರಣಯ ಗೀತಗಳು ರಚಿತವಾಗಿವೆ. ಟ್ರಾಜಿಕ್ ಪ್ರಕರಣವನ್ನು ನಿರೂಪಿಸುವುದರಲ್ಲಿ ಇವನ ಕೌಶಲ್ಯ ಎದ್ದು ತೋರುತ್ತದೆ. ಎಲಿಜಿಯ ಕವಿಗಳಲ್ಲಿ ಶ್ರೇಷ್ಠನೆಂದು ಖ್ಯಾತಿಗಳಿಸಿದವನು ಓವಿಡ್ (ಕ್ರಿ.ಪೂ. 43-ಕ್ರಿ.ಶ. 17?). ಪ್ರೇಮದ ಕವಿಯೆಂದು ಇವನಿಗೆ ಅಪರಿಮಿತ ಕೀರ್ತಿ ಸಂದಿವೆ. ಈತ ಪ್ರಣಯದ ಹೊಂಚು ಸಂಚು ಸಮ್ಮೋದಗಳ ಕವಿ. ಪ್ರೇಮದ ಸೂಕ್ಷ್ಮ ವಿನಯವನ್ನಾಗಲಿ ಭಾರಿ ಆವೇಶವನ್ನಾಗಲಿ ಇವನು ಊಹಿಸಿಕೊಳ್ಳಲಾರ, ವರ್ಣಿಸಲಾರ. ತನಗೇ ಅನ್ವಯಿಸುವಂತೆ ಕಟಕಿಯ ಮೂಲಕವೂ ಹಗುರವಾಗಿಯೂ ಕಥನ ಗೈಯುತ್ತಾನೆ. ನಿರೂಪಣಾ ಕೌಶಲ್ಯ ಇವನ ವಿಶಿಷ್ಟ ಸೊತ್ತು; ನಾಟಕೀಯತೆ ಇವನಿಗೆ ಒಗ್ಗಿ ಬಂದದ್ದು. ಇವನ ರೂಪಾಂತರ (ಮೆಟಮಾರ್ಫಸಿಸ್) ರೊಮ್ಯಾಂಟಿಕ್ ಪ್ರಣಯ ಕಥೆಗಳ ಖಜಾನೆಯಾಗಿದೆ. 6 ಗಣದ ಪದ್ಯಪಂಕ್ತಿಗೆ ಇವನಿಂದ ತ್ವರಿತ ಗತಿಯೂ ಬಳುಕಾಟವೂ ಒದಗಿತು. 10 ದೊಡ್ಡ ಕೃತಿಗಳನ್ನು ಇವನು ರಚಿಸಿದ. ಆದರೆ ಶಬ್ದಾಡಂಬರವನ್ನು ಇವನೆಂದೂ ಗೆಲ್ಲದೇ ಹೋದ. ಕಥೆಗಾರನಾಗಿಯೂ ಗ್ರೀಕ್ ಪುರಾಣಕಥೆ ರೋಮನ್ ಐತಿಹ್ಯಗಳಿಗೆ ವಿವರಣಶೀಲನಾಗಿಯೂ ಇವನು ತನ್ನ ಕಾಲದವರಿಗೆ ಮತ್ತು ಅನಂತರದವರಿಗೆ ಸ್ವೀಕರಿಸಲರ್ಹನಾದ ಇವನ ಪ್ರಭಾವ ಮುಂದಿನ ಸಾಹಿತಿಗಳ ಮೇಲೆ ಅಪಾರವಾಗಿ ಆಗಿದೆ.

ಅಗಸ್ಟಸ್ಸನ ಅವಧಿಯಲ್ಲಿ ಸಾಮಾಜಿಕ ಬಾಳು, ವೈಯಕ್ತಿಕ ಬಾಳು ಎರಡಕ್ಕೂ ನವೋದಯ ಒದಿಗಿಬಂತು. ಜೊತೆಗೆ ಸಾರ್ವಭೌಮತ್ವಕ್ಕೆ ತಿರುಗಿದ ನಾಡಿನ ಪೂರ್ವೋಪಾಖ್ಯಾನ ಮೇಧಾವಿಗಳಿಗೆ ರುಚಿವತ್ತಾದ ಐತಿಹ್ಯ ಮಾಲೆಯಂತೆ ಉಲ್ಲಾಸ ಕೊಟ್ಟಿತು. ಹಿಂದಣ ಅಚ್ಚರಿ ಕಥೆಯನ್ನು ವರ್ಜಿಲ್, ಹೊರೇಸ್, ಓವಿಡ್ಡರು ತಮ್ಮ ತಮ್ಮ ಬಗೆಯಲ್ಲಿ ಹಾಡಿ ಹೊಗಳಿದರು. ಅಧಿಕೃತವಾದ ಚರಿತ್ರೆಗೆ ಸಮಯ ಸಜ್ಜಾಗಿತ್ತು. ಲಿವಿ (ಕ್ರಿ.ಪೂ 59-ಕ್ರಿ.ಶ17?) ಅದನ್ನು ಕೈಗೊಂಡು ಮುಗಿಸಿದ. ಅವನು ಬರೆದ ಚರಿತ್ರೆ 142 ಸಂಪುಟಗಳ ಬೃಹದ್ಗ್ರಂಥ (ಈಗ 35 ಮಾತ್ರ ಉಪಲಬ್ಧವಾಗಿವೆ). ನೀತಿಬೋಧೆಯೇ ತನ್ನ ಹೆಗ್ಗುರಿಯೆಂದು ಈತ ಹೇಳಿಕೊಂಡಿದ್ದಾನೆ. ಐತಿಹ್ಯಗಳನ್ನು ಅಕ್ಕರೆಯಿಂದ ವಿವರಿಸುವಾಗ ಅವು ನಿಜವೇ ಸುಳ್ಳೇ ಎಂಬ ಪ್ರಶ್ನೆ ಇವನನ್ನು ಕಾಡಲಿಲ್ಲ. ಪ್ರಾಚೀನ ಮಹಾಪುರಷರ ಗುಣಧರ್ಮ ಅವುಗಳಿಂದ ಸುವ್ಯಕ್ತಗೊಳ್ಳುತ್ತದೆ. ವಿಷಯವನ್ನು ಕುರಿತು ಶ್ರದ್ಧೆ, ದೇಶಭಕ್ತಿ, ವರ್ಣನಾ ನೈಪುಣ್ಯ, ನಾಟಕೀಯತೆಗಳ ಜೊತೆ ತಿಳಿಯೂ ಕ್ರಮಬದ್ಧವೂ ಆದ ವಾಗ್ಝರಿಯಿಂದ ಕೂಡಿ ಇವನ ಶೈಲಿ ಚೇತೋಹಾರಿಯಾಗಿದೆ. ಅನೇಕ ಉತ್ಕøಷ್ಟ ಕಥನಭಾಗಗಳಿಂದಲೂ ಸಾರೋಕ್ತಿಗಳಿಂದಲೂ ಚರಿತ್ರೆ ತುಂಬಿಕೊಂಡಿದೆ. ವಿಶಾಲ ಯೋಜನೆಯನ್ನು ಮನಸ್ಸಿನಲ್ಲಿ ಸಿದ್ಧಪಡಿಸಿ ಅದನ್ನು ಸಂಪೂರ್ಣವಾಗಿ ಸಾಹಿತ್ಯರೀತ್ಯಾ ನೆರವೇರಿಸುವ ಜಾಣ್ಮೆ ರೋಮನರ ಹಿರಿಮೆ. ಲಿವಿ ಅದಕ್ಕೆ ಉತ್ತಮ ನಿದರ್ಶನ. ಮಹಾವ್ಯಕ್ತಿಗಳ ನಿಸ್ವಾರ್ಥ ಸೇವೆ ಹೇಗೆ ರೋಮಿನೊಳಗೆ ಹುದುಗಿದ್ದ ಪ್ರಭುಶಕ್ತಿಯನ್ನು ಹೊರಕ್ಕೆಳೆಯಿತು, ಅವರ ಮತ್ತು ಎಲ್ಲ ರೋಮನರ ವೀರಯೋಧರಿಗೆ ಸಮವಾದ ಕೆಚ್ಚು ಶ್ರಮ ಸಹಿಷ್ಣುತೆ ಚಾಕಚಕ್ಯ ಔದಾರ್ಯಗಳು ಹೇಗೆ ರೋಮಿಗೆ ನ್ಯಾಯವಾಗಿ ಸಲ್ಲತಕ್ಕ ಸಾರ್ವಭೌಮತ್ವವನ್ನು ತಂದುಕೊಟ್ಟುವು ಎಂಬುದನ್ನು ಲಿವಿಯ ಚರಿತ್ರೆಯ ಪುಟಗಳನ್ನು ಪಠಿಸಿ ಮನದಟ್ಟು ಮಾಡಿಕೊಳ್ಳಬಹುದು.

ನಾಲ್ಕನೆಯ ಅವಧಿ (ಕ್ರಿ.ಶ 17-130): ಅಗಸ್ಟಸ್ ಚಕ್ರವರ್ತಿಯ ಮರಣಾನಂತರ ಸುಮಾರು ಒಂದು ತಲೆಮಾರಿನ ತನಕ ಯಾವ ಹೊಸಬಗೆಯ ದಕ್ಷಕವಿಯೂ ಉದಯಿಸಲಿಲ್ಲ. ಫೀಡ್ರಸನ ಪ್ರಾಣಿಕಥೆಗಳೇ (ಫೇಬಲ್) ಈ ಕಾಲದ ಮುಖ್ಯಸಾಹಿತ್ಯವೆನ್ನಬಹದು. ವಿನೋದವುಂಟು ಮಾಡುವುದೂ ನೀತಿಹೇಳುವುದೂ ಇವನ ಉದ್ದೇಶ. ತೋಳ, ಕುರಿಮರಿ, ನರಿಯೂ ದ್ರಾಕ್ಷಿಯೂ, ಮರದ ದಿಮ್ಮಿ ಮತ್ತು ದೊರೆ, ನೀರುಹಾವು ಮುಂತಾದವು ಪ್ರಪಂಚ ಪ್ರಸಿದ್ಧವಾಗಿವೆ. ಇಂಥ ಕೆಲವು ಕಥೆಗಳಲ್ಲಿ ರಾಜಕೀಯ ವ್ಯಂಗ್ಯಾರ್ಥವನ್ನು ಕಂಡುಕೊಂಡ ಅಧಿಕಾರಿಗಳು ಫೀಡ್ರಸನನ್ನು ಸೆರೆಗೆ ತಳ್ಳಿದ್ದೂ ಉಂಟು. ಫೀಡ್ರಸನ ವಿಭಾವನಾಶಕ್ತಿ ಸಾಧಾರಣ ಮಟ್ಟದ್ದಾದರೂ ಒಳ್ಳೆಯ ಪದಪುಂಜವನ್ನು ಈತ ನೇಯಬಲ್ಲ. ನೋವು ಕೊಟ್ಟು, ಅದಕ್ಕೆ ಅಪಮಾನ ಸೇರಿಸು ಎಂಬುದು ಇವನ ಪ್ರಸಿದ್ಧ ಸೂಕ್ತಿಗಳಲ್ಲೊಂದು. ನೀರೊ ಪಟ್ಟಕ್ಕೆ ಬಂದ ಕೂಡಲೆ ಕಲೆಗಳಿಗೆ ಪ್ರೋತ್ಸಾಹ ಅಧಿಕವಾಯ್ತು. ಈತ ಸ್ವತಃ ಸಂಗೀತಜ್ಞನೂ ನಟನೂ ಆಗಿದ್ದ. ಇವನ ಕಾಲದ ಲೇಖಕರಲ್ಲಿ ಪರ್ಷಿಯಸ್, ಪೆಟ್ರೋನಿಯಸ್, ಸೆನೆಕ, ಲ್ಯೂಕನ್-ಈ ನಾಲ್ವರು ಪ್ರಸಿದ್ಧರಾಗಿದ್ದಾರೆ.

ಸೆನೆಕ (ಕ್ರಿ.ಪೂ. 4-ಕ್ರಿ.ಶ.65) ವಿರೋಧಾಭಾಸಗಳಿಂದ ಕೂಡಿದ ವಿಚಿತ್ರ ವ್ಯಕ್ತಿ; ದಾರ್ಶನಿಕ ಹಾಗೂ ರಾಜಕೀಯ ಪಿತೂರಿಗಾರ; ದೊಡ್ಡ ಧ್ಯೇಯಗಳನ್ನು ಉಪದೇಶಿಸುವ ತತ್ತ್ವಜ್ಞ, ಹಾಗೂ ಅಪರಿಮಿತ ವಿತ್ತಸಂಗ್ರಹಿ; ಆಲೋಚನಾಪ್ರಮುಖ ಬುದ್ಧಿವಂತ ಹಾಗೂ ಆಡಂಬರದ ಶೈಲಿಯವ; ನೀತಿಬೋಧಕ. ಈತ ಹೇರಳ ಬರೆಹಗಳನ್ನು ಬಿಟ್ಟು ಹೋಗಿದ್ದಾನೆ. 12 ಸಂವಾದಗಳು, 2 ನೈತಿಕ ಗ್ರಂಥಗಳು, 124 ಕುಶಲ ಪತ್ರಗಳು ಇತ್ಯಾದಿ. ಕುಶಲಪತ್ರಗಳೆಲ್ಲ ಜೀವನದ ನಾನಾ ವಿಚಾರಗಳನ್ನು ಕುರಿತ ಲಘು ಪ್ರಬಂಧಗಳಾಗಿವೆ.; ನಿಸರ್ಗದ ಘಟನೆಗಳನ್ನು ಸ್ಟೋಇಕ್ ದೃಷ್ಟಿಯಿಂದ ವಿಶ್ಲೇಷಿಸುವ 7 ಪ್ರಬಂಧಗಳನ್ನೂ ಸಾಫೊಕ್ಲೀಸ್ ಯೂರಿಪೀಡೀಸ್ ಮಾದರಿಯ 9 ಟ್ರಾಜಿಡಿಗಳನ್ನೂ ಈತ ರಚಿಸಿದ. ಇವನ ಟ್ರ್ಯಾಜಿಡಿಗಳಲ್ಲಿ ಭೀಷಣತೆಯೂ ಅಬ್ಬರವೂ ಜಾಸ್ತಿ; ಇವು ಓದುನಾಟಕಗಳಾಗಿದ್ದುವು. ಅನಂತರ 16ನೆಯ ಶತಮಾನದಲ್ಲಿ ಟ್ರ್ಯಾಜಿಡಿ ಪುನರುತ್ಥಾನಗೊಂಡಾಗ ಸೆನೆಕನೇ ಪ್ರೇರೇಪಕನೂ ಮಾರ್ಗದರ್ಶಿಯೂ ಆದ.

ಲ್ಯೂಕನ್ (39-65) ಫಾರ್ಸೇಲಿಯಾ ಎಂಬ ಮಹಾಕಾವ್ಯವನ್ನು ಬರೆದಿದ್ದಾನೆ. ಸೀಸರ್ ಹಾಗೂ ಪಾಂಪೆ ನಡುವೆ ಜರುಗಿದ ಅಂತರ್ಯುದ್ಧ ವನ್ನು ಈ ಕಾವ್ಯದಲ್ಲಿ ನಿರೂಪಿಸಲಾಗಿದೆ. ಕೇಟೊ ಈ ಕಾವ್ಯದ ನಾಯಕ. ಇನಿಯಡ್ ತರುವಾಯ ಬಂದ ಭವ್ಯಕಾವ್ಯ ಇದೊಂದೇ. ತಾರುಣ್ಯದ ಜೋರೂ ಭರಾಟೆಯೂ ಆಟಾಟೋಪದ ಭಾಷೆಯೂ ಈ ಕಾವ್ಯದಲ್ಲಿ ಎದ್ದುಕಾಣುತ್ತದೆ. ಆದರೂ ಹಲವರ ಮೆಚ್ಚಿಕೆಗೆ ಇದು ಪಾತ್ರವಾಗಿದೆ.

ಪರ್ಷಿಯಸ್ (34-62) ಲ್ಯೂಕನ್ನನ ಸಹವಿದ್ಯಾರ್ಥಿಯಾಗಿ ಸ್ಟೋಇಕ್ ಉಪಾಧ್ಯಾಯ ಕಾರ್ನೂಟಸ್ಸಸನ ಬಳಿ ವ್ಯಾಸಂಗ ಮಾಡಿದ. ಲ್ಯೂಸಿಲಿಯಸ್ಸಿನ ವಿಡಂಬನೆಗಳಿಂದ ಪ್ರೇರೇಪಿತನಾಗಿ 6 ವಿಂಡಂಬನೆಗಳನ್ನು ರಚಿಸಿದ. ಆದರೆ ಅವೆಲ್ಲ ಧರ್ಮೋಪದೇಶದ ಪ್ರಬಂಧಗಳು. ಹೊರೇಸ ನನ್ನು ಅನುಕರಿಸಹೋಗಿ ವಿಫಲನಾದ. ಅಲ್ಲಲ್ಲಿ ಕಾವ್ಯಲಕ್ಷಣವನ್ನು ಇವನು ಮೆರೆದರೂ ಒಟ್ಟಿನಲ್ಲಿ ಇವನ ಶೈಲಿ ಕ್ಲಿಷ್ಟವೂ ಮಬ್ಬುಮಸುಕೂ ಆದದ್ದು. ಇತರರ ವಾಗತಿರೇಕಗಳನ್ನು ಅವಹೇಳನ ಮಾಡುವ ಭರದಲ್ಲಿ ಈತ ತಾನೇ ವಾಗ್‍ವೈಪರೀತ್ಯಗಳಿಗೆ ಬಲಿಯಾದ.

ಪೆಟ್ರೋನಿಯಸ್(?-66) ಬರೆದದ್ದೆಂದು ನಂಬಿರುವ ಕಾದಂಬರಿ “ಸ್ಯಟಿರಿಕಾನ್”ನಲ್ಲಿ ಕೊಂಡ ಭಾಗ ಮಾತ್ರ ಈಗ ಉಳಿದು ಬಂದಿದೆ. ಇದು ಆ ಕಾಲದ ಕೆಳವರ್ಗದ ಜನಜೀವನದ ಪ್ರಾಮಾಣಿಕ ಪ್ರತಿಚಿತ್ರವನ್ನು ನೀಡುವ ವಾಸ್ತವಿಕ ಕಾದಂಬರಿಯೆಂದೂ ಪಾಶ್ಚಾತ್ಯ ಸಾಹಿತ್ಯದ ಮೊಟ್ಟಮೊದಲ ಕಾದಂಬರಿಯೆಂದೂ ಹೆಸರಾಗಿದೆ. ಇದು ಎನ್ಕೋಲ್ಪಿ ಯಸ್, ಅಸ್ಕಿಲ್ಟಸ್ ಎಂಬ ಇಬ್ಬರು ಪುಂಡ ಅಲೆಮಾರಿಗಳ ಸಾಹಸಗಳ ಕಥೆ. ಗೀಟಾನ್ ಎಂಬ ತುಂಟ ಬಾಲಕ ಅವರಿಗೆ ಸೇವಕ. ದಕ್ಷಿಣ ಇಟಲಿಯ ಅರೆ ಗ್ರೀಕ್ ನಗರಗಳೇ ಅವರ ಕಾರ್ಯಕ್ಷೇತ್ರ. ಒಮ್ಮೆ ಅವರಿಗೆ ಟ್ರೈಮಾಲ್ಕಿಯೊ ಎಂಬ ಧನಿಕ, ಅಸಂಸ್ಕøತ, ನಿನ್ನೆಮೊನ್ನೆಯ ದೊಡ್ಡಮನುಷ್ಯನ ಮಹಲಿನಲ್ಲಿ ಭೋಜನಕೂಟಕ್ಕೆ ಆಹ್ವಾನ ದೊರಕುತ್ತದೆ. ಮಹಲಿನ ಶೃಂಗಾರ ಒಂದೊಂದರಲ್ಲೂ ಕಣ್ಣುಕುಕ್ಕುವ ಡಾಂಭಿಕತೆ, ಹೇರಳ ಭಕ್ಷ್ಯ ಭೋಜ್ಯವೆಲ್ಲ ಚಿತ್ರವಿಚಿತ್ರ, ವಿಕಟಾಟ್ಟಹಾಸಾಲಂ ಕೃತ ಅತಿ ವಿಕಾರ, ಅತಿಥಿಗಳ ವರ್ತನೆ ನಗೆಪಾಟಲು, ಮಾತುಕಥೆ ಹುಚ್ಚುಹುಚ್ಚು; ಅಶ್ಲೀಲ. ಟ್ರೈಮಾಲ್ಕಿಯೊ ಎಲ್ಲರನ್ನೂ ಮೀರಿಸಿದ ಮಡ್ಡಿ. ಕುಡಿತದ ಅಮಲಿನಲ್ಲಿ ತನ್ನ ಮರಣಪತ್ರವನ್ನು ವಿವರಿಸುತ್ತಾನೆ. ತನಗಾಗಿ ಕಟ್ಟಿ ನಿಲ್ಲಿಸುವ ಗೋರಿಯನ್ನು ಬಣ್ಣಿಸುತ್ತಾನೆ. ವಿದ್ಯಾವಂತನಂತೆ ತೋರಿಸಿಕೊಳ್ಳುವ ಹೆಬ್ಬಯಕೆಯಿಂದ “ಟ್ರಾಯ್ ನಗರದ ಮುತ್ತಿಗೆಯಲ್ಲಿ ಹ್ಯಾನಿಭಾಲನೂ ಇದ್ದ, ಡೆಡಲಸ್ ನಯೋಬಿಯನ್ನು ಟ್ರೋಜನ್ ಕುದುರೆಯ ಹೊಟ್ಟೆಯೊಳಗೆ ಕೂಡಿಟ್ಟ, ಕ್ಯಸಾಂಡ್ರಾ ತನ್ನ ಮಕ್ಕಳನ್ನು ಕೊಂದು ಹಾಕಿದಳು” ಮುಂತಾದ ಸಾಹಿತ್ಯಕ ಅಪಭ್ರಂಶಗಳನ್ನು ಸುರಿಸುತ್ತಾನೆ. ಮೃಚ್ಛಕಟಿಕದ ಶಕಾರನನ್ನು ಜ್ಞಾಪಕಕ್ಕೆ ತರುವ ಪಾತ್ರವಿದು. ಜೋಡಿ ಭಂಡರಿಗೆ ಆಮೇಲೆ ಯೂಮೋಲ್ಪಸ್ ಎಂಬ ವೃದ್ಧನೂ ವಿಷಯ ಲಂಪಟನೂ ಆದ ಕವಿಯೊಬ್ಬನ ಸಹವಾಸ ಸಿಕ್ಕುತ್ತದೆ; ಅವನೊಂದಿಗೆ ಸಮುದ್ರಯಾನ ಕೈಗೊಳ್ಳುತ್ತಾರೆ. ಅವನು ಕಾವ್ಯಲಕ್ಷಣ ವನ್ನು ವಿವರಿಸುತ್ತಾನೆ; ಪದ್ಯಪಂಕ್ತಿಗಳನ್ನು ಕಟ್ಟಿ ವಾಚಿಸುತ್ತಾನೆ; ಸಮಕಾಲೀನ ಕವಿಗಳನ್ನು ಹಳಿಯುತ್ತಾನೆ. ಇಲ್ಲೆಲ್ಲ ಉತ್ತಮ ವಿಮರ್ಶೆಯ ಅಂಶವನ್ನು ಗುರುತಿಸಬಹುದಾಗಿದೆ.

ಅನಂತರ ಬಂದ ಸಾಹಿತಿಗಳಲ್ಲಿ ಹಿರಿಯ ಪ್ಲೀನಿ (23-79) ವೈಶಿಷ್ಟ್ಯ ದಿಂದ ಕೂಡಿದವ. ಇವನಿಗೆ ತೀರದ ಜ್ಞಾನದಾಹ. ಇವನ ದುಡಿಮೆ ಅದ್ಭುತವಾದದ್ದು; ಅಲ್ಪಸ್ವಲ್ಪ ನಿದ್ರೆಯನ್ನುಳಿದು ಮಿಕ್ಕೆಲ್ಲ ಸಮಯ ದಲ್ಲಿಯೂ ಈತ ಪುಸ್ತಕಾವಲೋಕನ ಗೈಯುತ್ತಿದ್ದ. ಸಾವಿರಾರು ಟಿಪ್ಪಣಿಗಳನ್ನು ಗುರುತು ಹಾಕಿಕೊಳ್ಳುತ್ತಿದ್ದ. ನೌಕಾಧಿಪತಿಯಾಗಿ ಕಾಳಗದಲ್ಲಿದ್ದಾಗ ಯಾರೋ ಹತ್ತಿರದ ಗುಡ್ಡಗಳಿಂದ ಹೊಗೆ ಬರುತ್ತಿದ್ದುದನ್ನು ಇವನಿಗೆ ತೋರಿಸಿದರಂತೆ. ಪ್ಲೀನಿ ತಕ್ಷಣ ಚಿಕ್ಕ ನೌಕೆಯೊಂದರಲ್ಲಿ ತನಿಖೆ ಮಾಡಲು ಹೊರಟು ಹಲವು ಸಂಗತಿಗಳನ್ನು ಪರಿಶೋಧಿಸಿ ಹೇಳಿ ಬರೆಯಿಸಿದನಂತೆ. ಆಗ ಒಂದೇ ಸಮನೆ ಜ್ವಾಲಾಮುಖಿ ಇವನ ಮೇಲೆ ಕಲ್ಲುಮಳೆ ಕರೆಯುತ್ತಿತ್ತಂತೆ. ಮೂರನೆಯ ದಿನ ಒಂದು ದಿಂಬನ್ನು ಮೈರಕ್ಷಣೆಗಾಗಿ ಇಟ್ಟುಕೊಂಡು ಬೀಳುವ ಕಲ್ಲುಗಳನ್ನೂ ಉಸಿರುಕಟ್ಟಿಸುವ ಧೂಮರಾಶಿಯನ್ನೂ ಲೆಕ್ಕಿಸದೇ ಸಮುದ್ರತೀರದಲ್ಲಿ ವಿಷಯಸಂಗ್ರಹಣೆಗೋಸ್ಕರ ಸುತ್ತಾಡಿದನಂತೆ ನಾನಾ ವಿಷಯಗಳ ಮೇಲೆ ಇವನು ಉದ್ಗ್ರಂಥಗಳನ್ನು ಬರೆದಿದ್ದಾನೆ. ಆದರೆ ಬಲುಪಾಲು ಉಪಲಬ್ಧವಿಲ್ಲ. ಉಳಿದುನಿಂತಿರುವ ಇವನ ಮಹಾಕೃತಿ 37 ಸಂಪುಟಗಳ ನಿಸರ್ಗದಚರಿತ್ರೆ. ಭೌತವಿಜ್ಞಾನ, ಭೂಗೋಳ, ಪ್ರಾಣಿವಿಜ್ಞಾನ, ಅಂಗರಚನೆ, ಔಷಧಿಗೆ ಬರುವ ಸಸ್ಯ, ಮಾನವ ಬುಡಕಟ್ಟುಗಳು-ಮೊದಲಾದ ಹಲವು ವಿಚಾರಗಳನ್ನು ಅದರಲ್ಲಿ ಪ್ರತಿಪಾದಿಸಿದ್ದಾನೆ. ಶಿಲ್ಪ ಚಿತ್ರಣ ಕಲೆಗಳ ಇತಿಹಾಸವೂ ಉಲ್ಲೇಖವಾಗಿದೆ. ಅನೇಕ ತಪ್ಪುಗಳಿಂದ ಕೂಡಿದ್ದರೂ ಈ ಗ್ರಂಥದಲ್ಲಿ ನೂರಾರೂ ಕುತೂಹಲಜನಕ ಸಂಗತಿಗಳು ವಿವರಿಸಲ್ಪಟ್ಟಿವೆ. ಆನೆಗಳು ಕಲಿತ ಚಾತುರ್ಯಗಳು, ಇಟಲಿಗೆ ಕ್ಷೌರಿಕರು ಮೊದಲು ಬಂದದ್ದು, ಯೋಧರ ಸೀಸಕಕ್ಕೆ ಉಷ್ಟ್ರಪಕ್ಷಿಯ ಗರಿಗಳ ಅಲಂಕಾರ, ಮುಖದ ಸುಕ್ಕನ್ನು ಕತ್ತೆಯ ಹಾಲು ಹಚ್ಚಿ ತೆಗೆಯುವಿಕೆ-ಇಂಥ ರೋಚಕ ವಿಷಯಗಳು ಕೂಡ ಈ ಗ್ರಂಥದಲ್ಲಿ ಕಂಡುಬರುತ್ತವೆ.

ಚಕ್ರವರ್ತಿ ಡಾಮಿಷಿಯನ್ನನ ಕಾಲದಲ್ಲಿ ಸೀಲಿಯಸ್ ಇಟಾಲಿಕಸ್ಸನ (26-101?) ಪ್ಯೂನಿಕ್ ಯುದ್ಧ, ಸ್ಟಾಟಿಯಸ್ಸನ (45-96) ತೀಬೈಡ್ ಎಂಬ ಕಥನ ಕಾವ್ಯಗಳು ಹೊರಬಂದುವು. ಉತ್ತಮ ವಿಮರ್ಶಕ ಕ್ವಿಂಟಿಲಿಯನ್ (ಸು. 40-95) ಯುವಕರ ವಿದ್ಯಾಭ್ಯಾಸದಲ್ಲಿ ಪ್ರಭಾವ ಯುಕ್ತ ಪಾತ್ರವಹಿಸಿದ. ಉಪಾಧ್ಯಾಯರಾಗಿ ಆಡಳಿತದವರಿಂದ ಸಂಬಳ ಪಡೆದವರಲ್ಲಿ ಇವನೇ ಮೊದಲಿಗ, 20 ವರ್ಷ ಪಾಠ ಹೇಳಿ ನಿವೃತ್ತಿ ಹೊಂದಿದ. ಇವನು ಬರೆದ ವಾಗ್ಮಿತೆಯ ವ್ಯವಸ್ಥೆ ಎಂಬ ಕೃತಿ ವಿದ್ಯಾಭ್ಯಾಸ, ಸಾಹಿತ್ಯವಿಮರ್ಶ ಎರಡಕ್ಕೂ ಒಂದು ಪ್ರಮಾಣ ಗ್ರಂಥವಾಗಿದೆ. 
ಇವರೆಲ್ಲರಿಗಿಂತಲೂ ಹೆಚ್ಚು ಸಮಗ್ರವಾಗಿಯೂ ರಸವತ್ತಾಗಿಯೂ ಜನಜೀವನವನ್ನು ಮಾರ್ಷಲ್ (ಸು. 40-104) ನಿರೂಪಿಸಿದ. ಈತ 64ರಲ್ಲಿ ರೋಮಿಗೆ ಬಂದು ಸೆನೆಕ ಮತ್ತು ಲ್ಯೂಕನರ ಆಶ್ರಯ ಪಡೆದು ಕ್ರಮೇಣ ಶ್ರೀಮಂತರ ಕೃಪೆಗೆ ಪಾತ್ರನಾದ; ತನ್ನ ಪುಸ್ತಕಗಳನ್ನು ಬೆಲೆಗೆ ಮಾರಿಯೂ ಹಣ ಸಂಪಾದಿಸಿದ. ಕಲೋಸಿಯಮ್ ಎಂಬ ಪ್ರದರ್ಶನಶಾಲೆ ಉದ್ಭಾಟನೆಗೊಂಡದ್ದನ್ನು ಪ್ರಶಂಸಿಸುವ  ಕವನಗಳೇ ಇವನ ಮೊದಲನೆಯ ಹೊತ್ತಗೆ; ಈಗ 33 ಕವನಗಳು ಉಳಿದುಬಂದಿವೆ. ಸ್ಯಾಟರ್ನಾಲಿಯ ಎಂಬ ಮಹೋತ್ಸವ ಸಂದರ್ಭದಲ್ಲಿ ಗೆಳೆಯರು ಕೊಡುತ್ತಿದ್ದ ಮತ್ತು ಸ್ವೀಕರಿಸುತ್ತಿದ್ದ ಉಡುಗೊರೆಗಳಿಗೆ ಒಪ್ಪುವ ಸೂಕ್ತಿಗಳನ್ನು ಎಲಿಜಿಯಾಕ್ ಶ್ಲೋಕಗಳಾಗಿ ಬರೆದಿದ್ದಾನೆ. ಹೀಗೆ ನಾಟುನುಡಿ (ಎಪಿಗ್ರಾಮ್) ಇವನ ಅನುರೂಪ ಕಾವ್ಯಮಾರ್ಗವಾಯ್ತು, ಶಕ್ತ ಸಾಧನವಾಯ್ತು, ದ್ರವ್ಯ ಮತ್ತು ಕೀರ್ತಿ ಎರಡನ್ನೂ ಒಟ್ಟಿಗೇ ಒದಗಿಸುವ ಮೂಲವಾಯ್ತು. ನಾಟುನುಡಿಗಳನ್ನು ನೂರರ ಕಂತೆಗಳಾಗಿ ವಿಂಗಡಿಸಿ ಒಟ್ಟು ಹನ್ನೆರಡು ಕಂತೆಗಳನ್ನು ಪ್ರಕಟಿಸಿದ. ನಾಟುನುಡಿ ಎಂಬ ಬಗೆಯೊಂದನ್ನು ಸ್ಥಾಪಿಸಿ ಕಲಾವತ್ತಾಗಿ ಮಾಡಿದ. ಕವನದ ಮೊದಲಣ ಪಂಕ್ತಿಗಳಲ್ಲಿ ಅರ್ಥಕ್ಕೆ ಒಂದು ಕ್ರಮವನ್ನಿತ್ತು ಕೊನೆಯಲ್ಲಿ ಹಠಾತ್ತಾಗಿ ಕ್ರಮ ಬದಲಾಯಿಸಿ ಬೇರೆ ಅರ್ಥ ಮೂಡಿಬರುವಂತೆ ತಂತ್ರಹೂಡುತ್ತಾನೆ. ಒಂದೆರಡು ಉದಾಹರಣೆಗಳನ್ನು ಹೆಸರಿಸಬಹುದು; “ನನ್ನ ವರಿಸಲು ಪಾಲಳಿಗೆ ಅಪೇಕ್ಷೆ. ಅವಳ ಕಂಡೆನಗೆ ಉಪೇಕ್ಷೆ; ಕಾರಣ ಅವಳು ವೃದ್ಧೆ. ನಾನವಳ ಕೈಹಿಡಿಯುತ್ತಿದ್ದೆ ಅವಳಾಗಿದ್ದಲ್ಲಿ ಇನ್ನೂ ಹೆಚ್ಚು ವೃದ್ಧೆ.; “ಎಲವೊ ನೀ ವಾಚಿಸುತ್ತಿರುವುದು ನನ್ನ ಕವನ. ನನ್ನ ಕವನ ಎಂದೆನೆ ? ಅಲ್ಲ ಅಲ್ಲ. ನಿನ್ನ ವಾಚನ ವೈಖರಿಯಿಂದ ಅದೀಗ ನಿನ್ನ ಕವನ. ಹೊಟ್ಟೆಬಾಕರು ಕುಡುಕರು, ಪರಾನ್ನಜೀವಿಗಳು, ಬೂಟಾಟಿಗರು, ಗ್ರಂಥಚೋರರು, ವಕ್ರತೆಯವರು, ಲುಬ್ಧರು ಮುಂತಾದವರೆಲ್ಲ ಇವನ ಗೇಲಿಗೆ ತುತ್ತಾಗಿದ್ದಾರೆ. ಒಳ್ಳೆಯ ಗೆಳೆಯರನ್ನು ಪತಿವ್ರತೆಯರನ್ನು ನೈಜಕವಿಗಳನ್ನು ಈತ ಮುಕ್ತಕಂಠದಿಂದ ಹೊಗಳಿದ್ದಾನೆ. ತನ್ನ ಕಾವ್ಯ ಉತ್ತಮ ಸಾಹಿತ್ಯವೆಂಬ ಭ್ರಮೆ ಮಾರ್ಷಲ್‍ಗೆ ಇರಲಿಲ್ಲ; ತನ್ನ ಕಾವ್ಯವನ್ನು ಎಲ್ಲರೂ ಎಲ್ಲೆಂದರಲ್ಲಿ ಆಸಕ್ತಿಯಿಂದ ಓದುತ್ತಾರೆಂಬ ವಾಸ್ತವಿಕತೆಯ ಬಗ್ಗೆ ಇವನಿಗೆ ಹೆಮ್ಮೆಯಿತ್ತು.

ಇದೇ ಅವಧಿಯ ಅಂತ್ಯದಲ್ಲಿ ಬಂದ ಇನ್ನಿಬ್ಬರು ಲೇಖಕರನ್ನು ಇಲ್ಲಿ ಹೆಸರಿಸಬಹದು. ಇವರಲ್ಲಿ ಮೊದಲನೆಯವನು ಟ್ಯಾಸಿಟಸ್ (ಸು. 55-120?). ಈತ ಉಚ್ಚ ರೋಮನ್ ವಂಶಸ್ಥ. ರಾಜ್ಯಾಡಳಿತದಲ್ಲಿ ಕೆಲಕಾಲ ಅಧಿಕಾರಿಯಾಗಿದ್ದ. ಈತ ಚರಿತ್ರೆಗಳು, ಬಖೈರುಗಳು ಎಂಬ ಎರಡು ಗ್ರಂಥಗಳನ್ನು ರಚಿಸಿದ್ದಾನೆ. ಟೈಬೀರಿಯಸ್ಸನಿಂದ ಹಿಡಿದು ಡಾಮಿಷಿಯನ್ ತನಕ ಎಲ್ಲ ಚಕ್ರವರ್ತಿಗಳ ಕಾಲದ ಚರಿತ್ರೆಯನ್ನೂ ಇದರಲ್ಲಿ ಕಥನಗೈದಿದ್ದಾನೆ. ಶ್ರೇಷ್ಠ ಚರಿತ್ರಕಾರನ ಸಕಲ ಗುಣಗಳೂ  ಇವನಲ್ಲಿ ಮನೆಮಾಡಿದ್ದುವು. ವ್ಯಕ್ತಿಯ ಅಂತರಾಳಕ್ಕೆ ನುಗ್ಗಿ ಗುಣಾವಗುಣಗಳ ತಾಯಿಬೇರನ್ನು ಗ್ರಹಿಸುವ ತೀಕ್ಷ್ಣ ದೃಷ್ಟಿ, ಘಟನಾವಳಿಯ ಸ್ವರೂಪದ ಯಥಾವತ್ ತಿಳಿವಳಿಕೆ, ಅವುಗಳ ಹಿಂದಿದ್ದು ಅವುಗಳನ್ನು ನಡೆಸುವ ಚಾಲಕಶಕ್ತಿಗಳ ಅರಿವು, ವಿಶದವೂ ಸ್ಫುಟವೂ ಹರಿತವೂ ಆದ ನಿರೂಪಣಾ ಸಾಮರ್ಥ್ಯ-ಎಲ್ಲದರಲ್ಲೂ ಇವನು ಬಲ್ಲಿದನಾಗಿದ್ದ. ಸಾರ್ವಭೌಮತ್ವದ ದಬ್ಬಾಳಿಕೆ ಕ್ರೌರ್ಯ ಕೇಡಿಗತನದಿಂದ ಇವನ ಹೃದಯ ನೊಂದು ಹೋಗಿತ್ತು. ಅದರ ದುಷ್ಟತೆಯ ಮೇಲೆ ಅವಧಾರಣೆಯನ್ನಿಟ್ಟು ಸೌಮ್ಯತೆಯನ್ನು ತೇಲಿಸಿದ. ಇವನ ಗ್ರಂಥಗಳು ಇತಿಹಾಸಕಾರರಿಗೂ ರಾಜಕಾರಣಿಗಳಿಗೂ ಅಮೂಲ್ಯ ಕೈಪಿಡಿಯಂತಿವೆ.

ಎರಡನೆಯವನು ಜುವೆನಲ್ (ಕ್ರಿ.ಶ ಸು. 60-130?). ಈತ ಬಲಿಷ್ಠನೂ ಉಗ್ರನೂ ಆದ ವಿಡಂಬನ ಪಟು. ಚಕ್ರವರ್ತಿಯ ಒಲುಮೆಯ ವನಾದ ನಟನೊಬ್ಬನನ್ನು ಪರಿಹಾಸಮಾಡಿದ ಕಾರಣಕ್ಕಾಗಿ ಇವನು ಡಾಮಿಷಿಯನ್ನನ ಕೋಪಕ್ಕೆ ತುತ್ತಾಗಿ ದೇಶಭ್ರಷ್ಟತೆಯನ್ನು ಅನುಭವಿಸಿದ. ಬಡತನದ ಕಷ್ಟ ಕಾರ್ಪಣ್ಯ ಕೊಂಚ ಕಾಲ ಇವನನ್ನು ಹಿಂಸಿಸಿತು. ಈತ ತೀವ್ರ ಭಾವೋದ್ರೇಕದ ಕವಿಯಾಗಿದ್ದ. ಈತ 16 ವಿಡಂಬನೆಗಳನ್ನು ರಚಿಸಿದ್ದಾನೆ. ರೋಮನರ ಜೀವನದಲ್ಲಿ ತುಂಬಿ ತುಳುಕಾಡುತ್ತಿದ್ದ ಕೆಟ್ಟತನ ಅಪಚಾರ ಮೂರ್ಖತನ ಮಾಲಿನ್ಯಗಳೇ ಇವನ ವಿಷಯ ಸಾಮಗ್ರಿ. ನಿಂದೆ ಖಂಡನೆ ಅಣಕ ಕೊರಚಾಟ ಕಹಿವಾಕ್ಕು ಎಲ್ಲದರಲ್ಲೂ ಇವನು ಪ್ರವೀಣ. ಇವನ ಹಾಸ್ಯ ಕೂಡ ಸಿಡುಕುಮೋರೆಯ ಗಹಗಹಿಕೆ. ಐಶ್ವರ್ಯವಂತರ ಮೇಲೂ ಇಡೀ ಮಹಿಳಾವರ್ಗದ ಮೇಲೂ ಇವನು ಕೆಂಡಕಾರಿದ್ದಾನೆ. ಒಂದೆರಡು ರೇಖೆಗಳನ್ನೆಳೆದು ರೂಪವೊಂದನ್ನು ನಿರ್ಮಿಸುವ ಬಲ್ಮೆ ಇವನಲ್ಲಿ ಕಂಡುಬರುತ್ತದೆ. ಇವನ ಕವಿತ್ವ ಕಲಾದೃಷ್ಟಿಯಿಂದಲೂ ಉತ್ತಮಮಟ್ಟದ್ದಾಗಿದೆ.

ಟ್ಯಾಸಿಟಸ್, ಜುವೆನಲ್- ಇವರ ಕರಾಳ ವರ್ಣನೆಯ ಸತ್ಯಾಂಶವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದರೂ ರೋಮನರ ಬಾಳು ಸಂಪೂರ್ಣ ವಾಗಿ ಕೊಳೆತುಹೋಗಿರಲಿಲ್ಲವೆಂಬುದಕ್ಕೆ ಕಿರಿಯ ಪ್ಲೀನಿ (ಸು. 61-113?) ಸಾಕ್ಷ್ಯ ನೀಡಿದ್ದಾನೆ. ಇವನೊಬ್ಬ ಭಾಷಣಕಾರ, ರಾಜಕಾರಣಿ, ತನ್ನ ಕುಶಲಪತ್ರಗಳನ್ನು 9 ಸಂಪುಟಗಳಲ್ಲಿ ಪ್ರಕಟಿಸಿದ. ಹತ್ತನೆಯದು ಇವನ ಮರಣಾನಂತರ ಹೊರಬಂತು. ಈತನ ಬರೆವಣಿಗೆಯ ವಿಷಯದ ಆಯ್ಕೆ ವೈವಿಧ್ಯಮಯವಾದುದು. ನಿಸರ್ಗ ದೃಶ್ಯ, ಕಾಡುಹಂದಿಯ ಬೇಟೆ, ಪ್ರತಿಮೆಯೊಂದರ ಕೊಳ್ಳಾಟ, ಕನಸೊಂದಕ್ಕೆ ವ್ಯಾಖ್ಯಾನ, ಊಟಕ್ಕೆ ಬಾರದೇ ಹೋದ ಗೆಳೆಯನ ಮೇಲೆ ಆಕ್ಷೇಪ, ಅಲಂಕಾರಶಾಸ್ತ್ರದ ಒಂದು ಸಮಸ್ಯೆ-ಹೀಗೆ ಸಮಯ ಸಂದರ್ಭ ಯಾವ ಸಾಮಗ್ರಿಯನ್ನಾದರೂ ಪ್ಲೀನಿ ಮಥಿಸದೆ ಬಿಟ್ಟಿಲ್ಲ. ಆದರೆ ಇವನ ಬರೆವಣಿಗೆಯಲ್ಲಿ ಹೆಚ್ಚಾಗಿ ಕೃತಕತೆ ಕಂಡುಬರುತ್ತದೆ ಎಂಬ ಅಭಿಪ್ರಾಯವಿದೆ.

130ರ ತರುವಾಯ: ಜುವೆನಲ್‍ನ ಅನಂತರ ರೋಮನ್ ಸಾಹಿತ್ಯ ರಾಷ್ಟ್ರೀಯತೆಯನ್ನೂ ಸ್ವಂತಿಕೆಯನ್ನೂ ಘನ ಪ್ರಭಾವವನ್ನೂ ಕಳೆದುಕೊಂಡಿತು. ಲೇಖನ ಚಟುವಟಿಕೆಯೇನೂ ಕಡಿಮೆಯಾಗದೆ ಸುಟಿಯಾಗಿಯೇ ಇತ್ತು. ಆದರೆ ಸೃಜನ ಕಾವ್ಯ ಅಪರೂಪವಾಗುತ್ತ ಬಂತು. ಹಿಂದಿನ ಸಾಹಿತ್ಯದ ಶೇಖರಣೆ, ವ್ಯಾಖ್ಯೆ ವ್ಯಾಖ್ಯಾನ ತಯಾರಿಕೆ ಇತ್ಯಾದಿ ಪರಾವಲಂಬನ ಕಾರ್ಯ ಮಾತ್ರ ಈ ಕಾಲದ ಸಾಹಿತಿಗಳಿಗೆ ಸಾಧ್ಯವಾಯ್ತು. ಈ ನಡುವೆ ಒಬ್ಬಿಬ್ಬರು ಹೆಸರಾಂತ ಸಾಹಿತಿಗಳೂ ಹುಟ್ಟಿಕೊಂಡರು. ಸ್ಯೂಟೋನಿಯಸ್ (70-160) ಎಂಬಾತ ಟ್ರೇಜನ್ ಚಕ್ರವರ್ತಿಯ ಕಾರ್ಯದರ್ಶಿಗಳಲ್ಲಿ ಒಬ್ಬನಾಗಿ ಹಳೆಯ ದಾಖಲೆಗಳನ್ನು ನೋಡುವ ಸೌಲಭ್ಯ ಪಡೆದುಕೊಂಡ. ತನ್ನ ಬಿಡುವಿನ ವೇಳೆಯನ್ನೆಲ್ಲ ಪ್ರಾಚ್ಯ ಸಂಶೋಧನೆಗೂ ಜೀವನಚರಿತ್ರೆ ಬರೆಯುವುದಕ್ಕೂ ವಿನಿಯೋಗಿಸಿದ. ಇವನ ಪುಸ್ತಕಗಳಲ್ಲಿ ಬಹುಭಾಗ ನಷ್ಟವಾಗಿದೆ. ಸೀಸರ್ ದೊರೆಗಳ ಜೀವನಚರಿತ್ರೆ ಇವನ ಪ್ರಧಾನ ಕೃತಿ. ಇದರಲ್ಲಿ ಜೂಲಿಯಸ್ ಸೀಸರ್ ಮತ್ತು ಅಗಸ್ಟಸ್ಸನಿಂದ ಡಾಮಿಷಿಯನ್ ತನಕದ 11 ಚಕ್ರವರ್ತಿಗಳ ಜೀವನಚರಿತ್ರೆ ಬಂದಿದೆ. ಪ್ರತಿಯೊಬ್ಬನ ವಂಶ ಜನನ ವೃತ್ತಿಗತಿಗಳನ್ನು ಇಲ್ಲಿ ವಿವರಿಸಿದ್ದಾನೆ. ಆದರೆ ಈ ನಿರೂಪಣೆಯಲ್ಲಿ ಚಾರಿತ್ರಿಕ ದೃಷ್ಟಿಯಾಗಲಿ ಆಳದ ತತ್ತ್ವಗಳ ಗ್ರಹಿಕೆಯಾಗಲಿ ಕಾಣಬರುವುದಿಲ್ಲ. ವಾಸ್ತವಿಕ ಸಂಗತಿಗಳಂತೆಯೇ ದಂತಕಥೆಗಳೂ ಇವನ ಬರೆಹದಲ್ಲಿ ಸ್ಥಾನಪಡೆದುಕೊಂಡಿವೆ. ಸೀಸರನ ಕಣ್ಣಾಲಿಗಳು ಕಪ್ಪಾಗಿ ಮರ್ಮಭೇಧಕ ವಾಗಿದ್ದವಂತೆ; ಕ್ಲಾಡಿಯಸ್ ಹಿಂದು ಮುಂದು ನೋಡುತ್ತ ವಕ್ರವಕ್ರವಾಗಿ ಹೆಜ್ಜೆಯಿಡುತ್ತಿದ್ದನಂತೆ; ಅವನ ನಗು ಕತ್ತೆ ಕೆನೆತದಂತಿತ್ತಂತೆ; ನೀರೋವಿಗೆ ಕುದುರೆಗಳೆಂದರೆ ಪ್ರಾಣವಂತೆ; ದೊಡ್ಡವನಾದಮೇಲೂ ದಂತದ ಕುದುರೆ ರಥಗಳೊಂದಿಗೆ ಆತ ಆಟವಾಡುತ್ತಿದ್ದನಂತೆ; ಟೈಟಸ್ ಒಂದು ದಿವಸ ಯಾರಿಗೂ ಏನೂ ಉಪಕಾರಮಾಡಲಿಲ್ಲ. ಆ ರಾತ್ರಿ ಆತ ನಿಟ್ಟುಸಿರುಬಿಟ್ಟು “ಒಂದು ದಿನವನ್ನು ನಾನು ಹಾಳುಮಾಡಿದೆ” ಎಂದನಂತೆ ಇತ್ಯಾದಿ. ಇವನ ಇನ್ನೊಂದು ಪುಸ್ತುಕ ಮಹಿಮಾಸ್ಪದರ ಜೀವನಚರಿತ್ರೆ, ಭಾಗಶಃ ಉಪಲಬ್ಧವಾಗಿದೆ. ಅದರ ಒಂದು ಅಧ್ಯಾಯ ವೈಯಾಕರಣಿಗಳನ್ನು ಕುರಿತದ್ದು. ಇದರಲ್ಲಿ 20 ಜನರ ಉಲ್ಲೇಖವಿದೆ. ವ್ಯಾಕರಣವೆಂದರೆ ವಿಶಾಲಾರ್ಥದಲ್ಲಿ ಸಾಹಿತ್ಯದ ಅಧ್ಯಯನವೇ. ಇದರಲ್ಲಿ ಒಂದು ಅಧ್ಯಾಯ ಅಲಂಕಾರಶಾಸ್ತ್ರಕ್ಕೆ ಮೀಸಲಾಗಿದ್ದು ಅದರಲ್ಲಿ ಅಲಂಕಾರಶಾಸ್ತ್ರದ ಬೆಳೆವಣಿಗೆಯನ್ನು ಐದು ಮಂದಿ ಲಾಕ್ಷಣಿಕರ ಕೊಡುಗೆಯನ್ನೂ ವಿವರಿಸಲಾಗಿದೆ. ಆದರೆ ಕವಿಗಳ ಜೀವನಚರಿತ್ರೆಯ ಅಧ್ಯಾಯ ಇವನು ಬರೆದದ್ದಲ್ಲ ಎಂಬ ಅಭಿಪ್ರಾಯವೂ ಇದೆ. ಅಲಸ್ ಜೆಲ್ಲಿಯಸ್ (123-165) ಎಂಬವನು ತನ್ನ ಮಕ್ಕಳಿಗೋಸ್ಕರ ಚಿಕ್ಕ ಚಿಕ್ಕ ಪ್ರಬಂಧಗಳನ್ನು ಬರೆದು ಅವುಗಳ ಸಂಕಲನಕ್ಕೆ “ಅಟ್ಟಿಕ್ ರಾತ್ರಿಗಳು” ಎಂಬ ಹೆಸರನ್ನು ಕೊಟ್ಟ. ಇದು ಇಪ್ಪತ್ತು ಸಂಪುಟಗಳಲ್ಲಿದ್ದು ಎಂಟನೆಯದೊಂದು ಮಾತ್ರ ಉಪಲಬ್ಧವಿಲ್ಲ.

ಈ ಅವಧಿಯಲ್ಲಿ ವ್ಯಾಕರಣದ ಅಧ್ಯಯನ ವ್ಯಾಖ್ಯಾನ ಕಾರ್ಯಚಟು ವಟಿಕೆ ಎಡೆಬಿಡದೆ ನಡೆಯುತ್ತ ಹೋಯ್ತು. 4ನೆಯ ಶತಮಾನದ ಮಧ್ಯಭಾಗದಲ್ಲಿದ್ದ ಈಲಿಯಸ್ ಡೊನೇಟಸ್ ವ್ಯಾಕರಣ ವಿದ್ಯೆಯೆಂಬ ಪುಸ್ತಕವನ್ನು ಬರೆದ. ಅದು ಮಧ್ಯಯುಗದ ಪೂರ್ತಿ ಉಪಯೋಗದ ಲ್ಲಿತ್ತು. ಪಠ್ಯಪುಸ್ತಕಕ್ಕೆ ಡೊನಾಟ್ ಎಂಬ ಪದ ಪರ್ಯಾಯವಾಯ್ತು. ಕೆಲವು ವ್ಯಾಖ್ಯಾನಗಳನ್ನೂ ಡೊನೇಟಸ್ ರಚಿಸಿದ. 4ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಸರ್ವಿಯಸ್ ಇನ್ನೊಬ್ಬ ಪ್ರಸಿದ್ಧ ವೈಯಾಕರಣಿ ಮತ್ತು ವ್ಯಾಖ್ಯಾನಕಾರ. ಸು. 400ರಲ್ಲಿದ್ದ ಮ್ಯಾಕ್ರೋಬಿಯಸ್ ದಾರ್ಶನಿಕ ಲೇಖಕ. ಈತ ಸ್ಯಾಟರ್ನಾಲಿಯ ಎಂಬ ಕೃತಿಯನ್ನು ಬರೆದಿದ್ದಾನೆ. ಇದರಲ್ಲಿ ಏಳು ಅಧ್ಯಾಯಗಳಿವೆ. ಪ್ಲೇಟೊ ಮಾದರಿಯ ಸಂವಾದವಿದು. ತನ್ನ ಇನ್ನೊಂದು ಪುಸ್ತಕದಲ್ಲಿ ಈತ ಸಿಸಿರೊವಿನ ವಾಕ್ಯಗುಚ್ಛಗಳನ್ನು ಉದ್ಧರಿಸಿ, ಆತ್ಮವನ್ನು ಕುರಿತ ಸಮಸ್ಯೆಗಳನ್ನು ದಾರ್ಶನಿಕರ ಮತದಂತೆಯೂ ಗಣಿತ, ಖಗೋಳವಿಜ್ಞಾನಗಳ ವಿವರಣೆಯಂತೆಯೂ ಬಿಡಿಸಿಹೇಳುವ ಪ್ರಯತ್ನವನ್ನು ಕೈಗೊಂಡಿದ್ದಾನೆ. ಆತ್ಮದ ದೈವಿಕತೆಯನ್ನೂ ಅಮರತ್ವ ವನ್ನೂ ಸ್ಥಾಪಿಸುವುದು ಇವನ ಮುಖ್ಯ ಆಕಾಂಕ್ಷೆಯಾಗಿತ್ತು.

ಇದೇ ಕಾಲವಾವಧಿಯ ಇನ್ನೊಬ್ಬ ಪ್ರಸಿದ್ಧ ಲೇಖಕ ಲ್ಯೂಸಿಯಸ್ ಅಪೂಲಿಯಸ್ ಯೌವನದಲ್ಲಿ ಇವನು ಅಲೆಕ್ಸಾಂಡ್ರಿಯಕ್ಕೆ ಹೋಗಿ ವ್ಯಾಧಿಗ್ರಸ್ತನಾದ. ಎಮಿಲಿಯ ಪ್ಯೂಡೆಂಟಿಲ ಎಂಬ ಧನಿಕ ವಿಧವೆ ಇವನನ್ನು ಉಪಚರಿಸಿ, ಮೋಹಗೊಂಡು ಮದುವೆಯಾದಳು. ಅವಳ ಸಂಬಂಧಿಗಳು ಮಾಟಮಂತ್ರದಿಂದ ಅವಳನ್ನು ಒಲಿಸಿಕೊಂಡನೆಂದು ಇವನ ಮೇಲೆ ವ್ಯಾಜ್ಯ ಹೂಡಿದರು. ಸೂಕ್ತ ಸಮರ್ಥನೆಗಳ ಮೂಲಕ ಅಪೂಲಿಯಸ್ ಗೆದ್ದ. ಇವನಿಗೆ ವಿಜ್ಞಾನ ಮಾಂತ್ರಿಕತೆಗಳಲ್ಲಿ ವಿಶೇಷ ಕುತೂಹಲವಿದ್ದುದೇನೊ ದಿಟ. ನಾನಾ ನಗರಗಳಿಗೆ ಹೋಗಿ ತತ್ತ್ವಶಾಸ್ತ್ರದ ಮೇಲೆ ಲ್ಯಾಟಿನ್‍ನಲ್ಲಿ ಉಪನ್ಯಾಸ ಕೊಡುತ್ತ ಕಾಲತಳ್ಳಿದ. ಹಲವು ಪ್ರಬಂಧಗಳನ್ನು ಬರೆದ. ಅವಾವುದರಿಂದಲೂ ಇವನಿಗೆ ಹೆಸರು ಬರಲಿಲ್ಲ. ಇವನ ಹೆಸರನ್ನು ಸಾಹಿತ್ಯರಂಗದಲ್ಲಿ ಚಿರಸ್ಥಾಯಿಗೊಳಿಸಿದ ಕೃತಿ ರೂಪಾಂತರ ಅಥವಾ ಚಿನ್ನದ ಕತ್ತೆ (ದಿ ಗೋಲ್ಡನ್ ಆ್ಯಸ್). 11 ಅಧ್ಯಾಯಗಳ ರುಚಿರ ಕಾದಂಬರಿಯಿದು. ಒಂದು ಗ್ರೀಕ್ ಪುಸ್ತಕ ಇದಕ್ಕೆ ಆಧಾರ. ಆಖ್ಯಾನದ ನಾಯಕ ಕ್ಯೂಸಿಯಸ್ ಎಂಬ ಗ್ರೀಕ್ ತರುಣ. ದೇಶಾಟನ ಮಾಡುತ್ತ ಮಾಟಶೂನ್ಯಗಳಿಗೆ ಪ್ರಸಿದ್ಧವಾಗಿದ್ದ ಥೆಸ್ಸೆಲಿಯನ್ನು ಹೊಕ್ಕು, ಮಿಲೊ ಎಂಬಾತನ ಮನೆಯಲ್ಲಿ ತಂಗಿದ. ಅಲ್ಲಿ ಮಿಲೊನ ಪತ್ನಿ ಒಂದು ಮುಲಾಮು ಹಚ್ಚಿಕೊಂಡು ಗೂಬೆಯಾದದ್ದನ್ನು ಕಂಡ. ಚಕಿತನಾಗಿ ತಾನೂ ಅಂಥ ರೂಪಾಂತರ ಕೈಗೊಳ್ಳುವ ಬಯಕೆಯಿಂದ ಗೃಹಸೇವಕಿಯ ಕೈಬೆಚ್ಚಗೆ ಮಾಡಿ ಸ್ವಲ್ಪ ಮುಲಾಮು ತರಿಸಿಕೊಂಡ. ಆದರೆ ಅದು ಬೇರೊಂದು ಮುಲಾಮು; ಹಚ್ಚಿಸಿಕೊಂಡ ಕೂಡಲೆ ಲ್ಯೂಸಿಯಸ್ ಕತ್ತೆಯಾಗಿಬಿಟ್ಟ. ಅಲ್ಲಲ್ಲಿ ಸುತ್ತಾಡಿ ದಾರಿಗಳ್ಳರ ಕೈಗೆ ಸಿಕ್ಕಿದ. ಭಾರ ಹೊತ್ತು ಪೆಟ್ಟು ತಿಂದು ಕುಗ್ರಾಸದಿಂದ ನರಳಿದ. ಅವರಿಂದ ತಪ್ಪಿಸಿಕೊಂಡು ನಡೆದು ಸಿಬೀಲಿ ದೇವತೆಯ ಪೂಜಾರಿಗಳ ಗುಂಪಿಗೆ ಸೇರಿ ಮನುಷ್ಯರಂತೆ ಬುದ್ಧಿಕಾರ್ಯಗಳನ್ನು ಮಾಡಿ ತೋರಿಸುವ ಸರ್ಕಸ್ ಪ್ರಾಣಿಯಾದ. ಪ್ರದರ್ಶನ ಜಂತುವಿನ ಬಾಳಿಗೆ ಬೇಸತ್ತು ಪುನಃ ತಪ್ಪಿಸಿಕೊಂಡು ಓಡಿಹೋಗಿ, ಕೊನೆಗೆ ಐಸಿಸ್ ದೇವತೆಯ ಕರುಣೆಯಿಂದ ಗಾರ್ದಭರೂಪವನ್ನು ಕಳೆದುಕೊಂಡು ಮಾನವನಾಗಿ, ಐಸಿಸ್-ಆಸಿರಸ್ ಪಂಥದ ಭಕ್ತನಾದ ಮನುಷ್ಯನ ಆತ್ಮ ಇಂದ್ರಿಯ ಚಾಪಲ್ಯಕ್ಕೆ ಒಳಗಾಗಿ ತ್ರಾಸಪಟ್ಟು ಕೊನೆಗೆ ಗೆಲ್ಲುವ ತತ್ತ್ವ ಅನ್ಯಾರ್ಥವಾಗಿ ಈ ಕಥೆಯಲ್ಲಿ ನಿರೂಪಿತವಾಗಿದೆ. ನಾಜೂಕಿನದೂ ಚಿತ್ರಮಯವೂ ಆದ ಇವನ ಕಥನಶೈಲಿ ಆಕರ್ಷಕವಾಗಿದೆ. ಮುಖ್ಯಕತೆಯಂತೆಯೇ ಕಳ್ಳರಿಂದ ಹೇಳಿಸಿರುವ ಉಪಕಥೆಗಳು ಕೂಡ ಸ್ವಾರಸ್ಯವಾಗಿವೆ.

ರೋಮಿನ ಕಟ್ಟಕಡೆಯ ಕವಿಯೆಂಬ ಹೆಸರು ಕ್ಲಾಡಿಯಸ್‍ಗೆ ಸಲ್ಲುತ್ತದೆ. ಇವನೊಬ್ಬ ಗ್ರೀಕ್ ಪ್ರಜೆ. ಬಾಲ್ಯವನ್ನು ಅಲೆಕ್ಸಾಂಡ್ರಿಯದಲ್ಲಿ ಕಳೆದು, ರೋಮಿನಲ್ಲಿ 395ರಿಂದ 404ರ ತನಕ ತಂಗಿದ್ದ. ಚಕ್ರವರ್ತಿಯನ್ನೂ ಅವನ ಸಲಹೆಗಾರರನ್ನೂ ಹೊಗಳುವ ಅಧಿಕೃತ ಪದ್ಯಗಳನ್ನು ಈತ ಬರೆದಿದ್ದಾನೆ. ಮುಖ್ಯವಾಗಿ ಸೈನ್ಯಾಧಿಪತಿ ಸ್ಟಿಲಿಕೊವಿನ ಪ್ರಶಂಸೆ ಮಾಡಿದ್ದಾನೆ. ಗಾತ್ ಬುಡಕಟ್ಟುಗಳ ಮೇಲಣ ಯುದ್ಧಗಳನ್ನು ಕುರಿತು ಆಫ್ರಿಕದಲ್ಲಿ ರಾಷ್ಟ್ರದುರಾಕ್ರಮಣಿಯಾಗಿದ್ದ ಗಿಲ್ಡೊವಿನ ಮೇಲೂ ಕಥನಕಾವ್ಯಗಳನ್ನು ಈತ ಕಟ್ಟಿದ. ಕಲಾತಂತ್ರವೂ ಶಬ್ದಕೋಶವೂ ವಾಗ್ಝರಿಯೂ ಇವನ ವಶದಲ್ಲಿದ್ದವು. ಈತ ಅನೇಕ ಚಿಕ್ಕ ದೊಡ್ಡ ಕವನಗಳನ್ನು ರಚಿಸಿದ್ದು ವೆರೋನಾದ ಮುದುಕ ಎಂಬ ಗ್ರಾಮೀಣ ಪದ್ಯ ಪ್ರಖ್ಯಾತಿ ಪಡೆದಿದೆ.

ಮುಂದೆ 4-5ನೆಯ ಶತಮಾನಗಳಲ್ಲಿ ಲ್ಯಾಟಿನ್ ಸಾಹಿತ್ಯ ಇಳಿಮುಖ ಗೊಂಡು ದಾರಿದ್ರ್ಯಾವಸ್ಥೆಗೆ ಬಿತ್ತು. 4ನೆಯ ಶತಮಾನದ ಪ್ರಾರಂಭದಲ್ಲಿ ಕಾನ್‍ಸ್ಟೆಂಟೈನ್ ಚಕ್ರವರ್ತಿ ರೋಮಿನ ಅಧಿಕೃತ ಮತಧರ್ಮವನ್ನು ಕ್ರಿಶ್ಚಿಯನ್ ಪಂಥಕ್ಕೆ ತಿರುಗಿಸಿದ್ದು, ಅಂದಿನ ಸಾಹಿತಿಗಳು ಲೌಕಿಕ ಬರೆವಣಿಗೆಗೆ ಲ್ಯಾಟಿನ್ ಭಾಷೆಯನ್ನು ಬಿಟ್ಟು ಹೆಚ್ಚುಹೆಚ್ಚಾಗಿ ಗ್ರೀಕನ್ನು ಬಳಸತೊಡಗಿದ್ದು ಲ್ಯಾಟಿನ್ ಸಾಹಿತ್ಯದ ಅವನತಿಗೆ ಕಾರಣವಾದ ಎರಡು ಮುಖ್ಯ ಸಂಗತಿಗಳೆನ್ನಬಹುದು. ಅನಂತರ ಕ್ರಿಶ್ಚಿಯನ್ ಲ್ಯಾಟಿನ್ ಸಾಹಿತ್ಯ ಪ್ರವರ್ಧಮಾನಕ್ಕೆ ಬಂತು. ಈ ಸಾಹಿತ್ಯ ಬೆಳೆವಣಿಗೆಗೆ ಆಗಸ್ಟಿನ್ (354-430), ಜೆರೋಮ್ (340-420), ಆಂಬ್ರೋಸ್ (340-397), ಪ್ರುಡೆಂಟಿಯಸ್ ಮೊದಲಾದವರು ಅಸ್ತಿಭಾರಹಾಕಿದರು.	
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ